ಶಿರಾ
ಏರುತ್ತಿರುವ ಜನಸಂಖ್ಯೆಯ ನಡುವೆ ಸಂಪನ್ಮೂಲಗಳ ಕ್ರೋಡೀಕರಣದ ಮೋಹ ಹೆಚ್ಚಿದೆಯೇ ವಿನಹ ಸಾಮಾಜಿಕ ಜವಾಬ್ದಾರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಉಪಾಧ್ಯಕ್ಷ ಚಾಮರಾಜ ಪಾಟೀಲ್ ಅವರು ವಿಷಾದಿಸಿದರು.
ನಗರದ ಹೊರಹೊಲಯದ ಗುಮ್ಮನಹಳ್ಳಿ ಗೇಟ್ನಲ್ಲಿರುವ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ನಡೆದ ಎರಡನೇ ದಿನದ ಬರಮುಕ್ತ ಕರ್ನಾಟಕ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಎಲ್ಲಾ ಯೋಜನೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದಾಗ ಅದರ ನಿಜವಾದ ಧ್ಯೇಯ ಏನೆಂಬುದು ಅರಿವಾಗುತ್ತದೆ. ಇಂದಿನ ಯೋಜನೆಗಳು ಜನಪರವಾಗಿದೆಯೋ ಇಲ್ಲವೋ ಎಂಬ ಅರಿವು ಎಷ್ಟು ಮುಖ್ಯವೋ, ಇದರಿಂದ ಜನರ ಅಭ್ಯುದಯ ಸಾಧ್ಯವೇ ಎಂಬ ರಚನಾತ್ಮಕ ಪ್ರಶ್ನೆಗಳನ್ನು ಎತ್ತುವುದು ಅಷ್ಟೇ ಮುಖ್ಯ ಎಂದರು.
ರೈತ ಸಂಘದ ಬೆಂಬಲವನ್ನು ಸ್ವಾಗತಿಸಿದ ಜಲ ಮನುಷ್ಯ ರಾಜೇಂದ್ರ ಸಿಂಗ್ ಅವರು ಸಂಘವನ್ನು ಅಭಿನಂದಿಸಿದರು.
ಪ್ರತಿಭಟನೇ ಯಾವುದೇ ಹಂತದಲ್ಲಿರಲಿ ಪ್ರತಿಭಟನೆ ಮಾಡಬೇಕು. ಕೆರೆ, ನದಿ ಒತ್ತುವರಿ, ನದಿ ಕಬಳಿಕೆಯನ್ನು ನಾವು ಯಾವತ್ತಿಗೂ ಸಹಿಸಬಾರದು ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಸಲಹೆ ನೀಡಿದರು.
ರೈತ ಸಂಘಟನೆಯ ಬಡಗಳಪುರ ನಾಗೇಂದ್ರ ಮಾತನಾಡಿ, ಜಲಾಮೃತ ಯೋಜನೆಯನ್ನು ಪ್ರತಿ ಹಂತದಲ್ಲಿಯೂ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೈತ ಸಂಘಟನೆ ಸಂಪೂರ್ಣ ಸಹಕಾರ ನೀಡುತ್ತದೆ. ಇಂದು ಏಕ ಬೇಸಾಯಕ್ಕಿಂತ ಬಹು ಬೇಸಾಯ ಪದ್ದತಿ ಉತ್ತಮ. ಜೊತೆಗೆ ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ಕೊಡಬೇಕು ಎಂದರು.
ಬರಮುಕ್ತ ಕರ್ನಾಟಕದ ತರಬೇತಿಯ ಶಿಬಿರಾರ್ಥಿಗಳು 7 ತಂಡಗಳಾಗಿ ವಿಂಗಡಣೆಗೊಂಡು ಜಲಾಮೃತ, ಕೆರೆ ಪುನಃಶ್ಚೇತನ, ಜಲ ಸಾಕ್ಷಾರತೆ, ಮಳೆ ನೀರಿನ ಕೊಯ್ಲು, ಕೊಳವೆಬಾವಿ ಹಾಗೂ ನದಿ ಪುನಃಶ್ಚೇತನ, ಕರ್ನಾಟಕ ಅರಣ್ಯೀಕರಣ ಹಾಗೂ ತರಬೇತಿ ಕುರಿತು ವಿಷಯ ಮಂಡನೆ ಮಾಡಲಾಯಿತು.