ಬೆಳಗಾವಿ:
ಎಂಇಎಸ್ ಪ್ರಮುಖ ಮುಖಂಡ ಹಾಗು ಮಾಜಿ ಶಾಕರೂ ಆಗಿದ್ದ ಶ್ರೀ ಸಂಭಾಜಿ ಪಾಟೀಲ್ ಅವರು ನಿನ್ನೆ ನಿಧನಾರಾಗಿದ್ದಾರೆ. ಆದರೆ ಅವರ ಮಗಳಾದ ಸಂದ್ಯಾ ಪಾಟೀಲ್ ನನ್ನ ತಂದೆಯವರದ್ದು ಸಹಜ ಸಾವಲ್ಲ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.
ನಿನ್ನೆ ರಾತ್ರಿ ಸುಮಾರು 8.35ರ ವೇಳೆಗೆ ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಸಂಭಾಜಿ ಪಾಟೀಲ್ ಹೃದಯಾಘಾತದಿಂದ ಅಸುನೀಗಿದ್ದರು. ಆದರೆ ತಡರಾತ್ರಿ ಆಸ್ಪತ್ರೆಗೆ ಧಾವಿಸಿದ ಅವರ ಪುತ್ರಿ ಸಂದ್ಯಾ ತಂದೆ ಸಾವಿನ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆಕೆ ಮರಣೋತ್ತರ ಪರೀಕ್ಷೆ ನಡೆಸಲು ಕೋರಿದ್ದಲ್ಲದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುಡಿಆರ್ 08/2019 ಸಿಆರ್ ಪಿಸಿ 174 ಅಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .ದೂರಿನನ್ವಯ ಶನಿವಾರ ಬೆಳಿಗ್ಗೆ ಸಂಭಾಜಿ ಪಾಟೀಲ್ ಅವರ ಮೃತದೇಹವನ್ನು ಕೆಎಲ್ ಇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಅಂತ್ಯಸಂಸ್ಕಾರ
ನಿನ್ನೆ ಸಾವಿಗೀಡಾದ ಬೆಳಗಾವಿ ಮಾಜಿ ಶಾಸಕ ಸಂಬಾಜಿ ಪಾಟೀಲ್ ಅಂತ್ಯ ಸಂಸ್ಕಾರ ಶನಿವಾರ ಸಂಜೆ ಶಹಾಪುರದ ಸ್ಮಶಾನದಲ್ಲಿ ನೆರವೇರಿದೆ.ಸಕಲ ಸರ್ಕಾರಿ ಗೌರವದೊಡನೆ ಪಾಟೀಲ್ ಅವರ ಅಂತ್ಯ ಸಂಸ್ಕಾರ ನೆರವೇರಿದೆ.
ಅಂತ್ಯ ಸಂಸ್ಕಾರದ ವೇಳೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಸುರೇಶ್ ಅಂಗಡಿ ಸೇರಿ ಹಲವು ಗಣ್ಯರು, ಅಭಿಮಾನಿಗಳು ಭಾಗವಹಿಸಿ ಅಂತಿಮ ಗೌರವ ಸಲ್ಲಿಸಿದ್ದರು.