ಅನುಮಾನಾಸ್ಪದ ರೀತಿಯಲ್ಲಿ ಕೋಳಿಗಳ ಸಾವು

ಹುಳಿಯಾರು:

     ಹುಳಿಯಾರು ಹೋಬಳಿಯ ನಂದಿಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದ ರೀತಿ ನೂರಾರು ನಾಟಿ ಕೋಳಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.ಇಲ್ಲಿನ ಕೃಷ್ಣಪ್ಪ ಎಂಬುವವರ ಕೋಳಿ ಫಾರಂನಲ್ಲಿ ಈ ದುರ್ಘಟನೆ ನಡೆದಿದ್ದು ಕಳೆದ ರಾತ್ರಿ ಇದಕ್ಕಿದ್ದ ಹಾಗೆ ಹತ್ತನ್ನೆರಡು ಕೋಳಿಗಳು ಸಾವನ್ನಪ್ಪಿದವು. ಅವುಗಳನ್ನು ನಿರ್ಜನ ಪ್ರದೇಶಕ್ಕೆ ವಿಸರ್ಜಿಸಿ ಬರುವಷ್ಟರಲ್ಲಿ ಮತ್ತೊಷ್ಟು ಕೋಳಿಗಳು ಹೀಗೆ ರಾತ್ರಿಯಿಂದ ಬೆಳಿಗ್ಗೆಯವರೆವಿಗೆ ನೂರಕ್ಕೂ ಹೆಚ್ಚು ಮಾರಾಟಕ್ಕೆ ಸಿದ್ಧವಾಗಿದ್ದ ಕೋಳಿಗಳು ಸಾವನ್ನಪ್ಪಿವೆ.

     ತಮ್ಮ ವಾಸದ ಮನೆಯ ಪಕ್ಕದಲ್ಲೇ ಕೋಳಿ ಸಾಕಾಣಿಕೆಯ 2 ಘಟಕಗಳನ್ನು ಮಾಡಿಕೊಂಡು ಒಂದೊಂದರಲ್ಲಿ ಇನ್ನೂರೈವತ್ತು ಕೋಳಿಗಳನ್ನು ಸಾಕುತ್ತಿದ್ದರು. ಈ ಎರಡು ಘಟಕದಲ್ಲಿ ರಸ್ತೆ ಪಕ್ಕದಲ್ಲಿದ್ದ ಘಟಕದ ಕೋಳಿಗಳು ಮಾತ್ರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಇನ್ನೊಂದು ಘಟಕದ ಕೋಳಿಗಳು ಆರೋಗ್ಯದಿಂದಿವೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳಾರೋ ಕೋಳಿ ಕುಡಿಯುವ ನೀರಿಗೆ ವಿಷ ಬೆರೆಸಿರಬಹುದೆಂದು ಅನುಮಾನಿಸಲಾಗಿದೆ.

      ಸಾವನ್ನಪ್ಪಿರುವ ಕೋಳಿಗಳಲ್ಲಿ ಕೆಲ ಕೋಳಿಗಳು ಹಸಿರು ಬಣ್ಣಕ್ಕೆ ವಾಂತಿ ಸಹ ಮಾಡಿಕೊಂಡಿದ್ದವು ಎಂದು ಕೃಷ್ಣಪ್ಪ ತಿಳಿಸಿದ್ದು ಕೋಳಿಗಳ ಸಾವಿಗೆ ನಿಖರ ಕಾರಣ ಪತ್ತೆಗಾಗಿ ಶಿರಾದ ಪಶು ವೈದ್ಯರು ಸಾವನ್ನಪ್ಪಿರುವ ಕೋಳಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ಉಳಿದ ಕೋಳಿಗಳಿಗೆ ಟಾನಿಕ್ ಕೊಟ್ಟಿದ್ದು ಅವುಗಳನ್ನು ಹಾಕಿದ ನಂತರ ಕೋಳಿಗಳ ಸರಣಿ ಸಾವು ನಿಂತಿದೆ ಎಂದು ತಿಳಿಸಿದರು.

      ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕೃಷ್ಣಪ್ಪ ಮಳೆಬೆಳೆಯಿಲ್ಲದೆ ಕೂಲಿ ಸಿಗದಾದಮೇಲೆ ಕೋಳಿ ಸಾಕಾಣಿಕೆಯ ಸ್ವದ್ಯೋಗಕ್ಕೆ ಇಳಿದರು. ಸರ್ಕಾರದ ಸಬ್ಸೀಡಿ ಸ್ಕೀಂ ಪಡೆಯದೆ ಕೂಡಿಟ್ಟಿದ್ದ ಹಣದಲ್ಲಿ ಮೊದಲ ಹಂತವಾಗಿ 350 ಕೋಳಿ ಮರಿ ತಂದು ಸಾಕಿ ಬೆಂಗಳೂರಿನವಿಗೆ ಮಾರಿ ಒಲ್ಳೆಯ ಲಾಭ ಗಳಿಸಿದ್ದರು.

    ಎರಡನೇ ಹಂತವಾಗಿ ಈ ಬಾರಿ 500 ಮರಿಗಳನ್ನು ತಂದು ಸಾಕಿ ಮಾರಾಟ ಹಂತಕ್ಕೆ ಬಂದಿದ್ದ ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link