ಆಂಧ್ರಪ್ರದೇಶ:
ಕಳೆದ ಚುನಾವಣೆಯಲ್ಲಿ ಏಕಚಕ್ರಾಧಿಪತ್ಯ ಮೆರೆದಿದ್ದ ಚಂದ್ರಬಾಬು ನಾಯ್ಡು ಇಡೀ ದೇಶದ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾಗಿದ್ದರು ಐದು ವರ್ಷದ ನಂತರ ಅವರೇ ಕಟ್ಟಿದ ರಾಜ್ಯ ಆಂಧ್ರಪ್ರದೇಶದಲ್ಲಿ ಇಂದು ನಾಯ್ಡು ಯುಗ ಅಂತ್ಯವಾಗಿದ್ದು ವೈಎಸ್ಆರ್ ಕಾಂಗ್ರೆಸ್ ಹೊಸ ಯುಗಕ್ಕೆ ನಾಂದಿ ಹಾಡಿದೆ ಮತ್ತು ಪ್ರತ್ಯೇಕ ರಾಜ್ಯವಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಧೂಳೀಪಟವಾಗಿದ್ದು, ಜಗನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಸಿಪಿ ಅಧಿಕಾರದ ಗದ್ದುಗೆ ಏರಲಿದೆ.
2019ರ ಏಪ್ರಿಲ್ 11ರಂದು 175 ವಿಧಾನಸಭಾ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 88 ಸ್ಥಾನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವೈಎಸ್ ಆರ್ ಸಿ ಬರೋಬ್ಬರಿ 148 ಸ್ಥಾನ ಪಡೆಯುವ ಮೂಲಕ ಅಧಿಕಾರ ಗದ್ದುಗೆ ಏರಿದೆ.
ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಕೇವಲ 25 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಧೂಳೀಪಟವಾಗಿದೆ. ಇದರೊಂದಿಗೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿದಿದ್ದು, ಪ್ರಧಾನಿ ಕನಸು ಕೂಡಾ ನುಚ್ಚು ನೂರಾಗಿದೆ! ಆಂಧ್ರಪ್ರದೇಶದಲ್ಲಿ ಜಗನ್ ಸಿಎಂ ಪಟ್ಟ ಅಲಂಕರಿಸಲಿದ್ದು, ಚಂದ್ರಬಾಬು ನಾಯ್ಡು ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ವರದಿ ತಿಳಿಸಿದೆ.