ಲಕ್ನೋ
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಅವರನ್ನು ಹೊಗಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಸೂಲಿದಾರ ಎಂದು ಜರಿದಿರುವ ಕಾರಣಕ್ಕಾಗಿ ಉತ್ತರ ಪ್ರದೇಶದ ಹಿರಿಯ ಬಿಜೆಪಿ ನಾಯಕ ಐ.ಪಿ .ಸಿಂಗ್ ಅವರನ್ನು ಆರು ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರ ನಿರ್ದೇಶನದ ಮೇರೆಗೆ ಐ. ಪಿ. ಸಿಂಗ್ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್ ಸೋನ್ಕರ್ ತಿಳಿಸಿದ್ದಾರೆ.
ಅಜಂಗಡದಿಂದ ಸ್ಪರ್ಧಿಸುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ನಿರ್ಧಾರವನ್ನು ಸ್ವಾಗತಿಸಿ ತಮ್ಮ ಮನೆಯನ್ನು ಅವರಿಗೆ ಚುನಾವಣಾ ಕಚೇರಿಯಾಗಿ ಮಾಡಿಕೊಳ್ಳಲು ಬಿಟ್ಟುಕೊಡುವುದಾಗಿ ಪ್ರಕಟಿಸಿ ಬಿಜೆಪಿ ನಾಯಕರ ಕೋಪಕ್ಕೆ ಗುರಿಯಾಗಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ.
ಅಖಿಲೇಶ್ ಯಾದವ್ ಅವರು ಅಭ್ಯರ್ಥಿಯಾಗಿರುವುದು ಪೂರ್ವಾಂಚಲ ಜನರಿಗೆ ಸಂತೋಷವಾಗಿದೆ. ಅಖಿಲೇಶ್ ಅವರು ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯ ಕೊನೆಗೊಳಿಸಲಿದ್ದಾರೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದರು.
ಗುಜರಾತಿನಿಂದ ಬಂದ ಇಬ್ಬರು ಪೀಡಕರು, ಉತ್ತರ ಭಾರತದ ಜನತೆ ಐದು ವರ್ಷಗಳ ಕಾಲ ನರಳುವಂತೆ ಮಾಡಿದ್ದಾರೆ ಎಂದು ಮೋದಿ ಮತ್ತು ಅಮಿತ್ ಷಾ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ಮೋದಿಯವರನ್ನು ಎಲ್ಲ ಬಿಜೆಪಿ ನಾಯಕರು ‘ನಾನೂ ಚೌಕಿದಾರ’ ಎಂದು ಹೇಳಿಕೊಂಡು ಟ್ವೀಟ್ ಮಾಡಿದರೆ ಸಿಂಗ್ ಮಾತ್ರ ವಸೂಲಿದಾರ ಎಂದು ಟ್ವೀಟ್ ಮೂಲಕವೇ ಜರಿದಿದ್ದರು.
2012 ರಲ್ಲಿ ಬಿ.ಎಸ್.ಪಿ ನಾಯಕ ಬಾಬು ಸಿಂಗ್ ಕುಶಾವಾ ಅವರನ್ನು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವ ತೀರ್ಮಾನದ ವಿರುದ್ಧ ಸಿಡಿದೆದ್ದ ಕಾರಣಕ್ಕಾಗಿ ಸಿಂಗ್ ಅವರನ್ನು ಕೆಲ ಕಾಲ ಪಕ್ಷದಿಂದ ಹೊರ ಹಾಕಲಾಗಿತ್ತು.