ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿ ವಿಜಯ ಸಾಧಿಸಿದ ಸುದ್ದಿ ತಿಳಿದ ಇಲ್ಲಿನ ಬಿಜೆಪಿ ಕಾರ್ಯಕರ್ತರು ಪ್ರಾರಂಭದ ಹಂತದಲ್ಲಿ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂತಸ ವ್ಯಕ್ತ ಪಡಿಸಿದ್ದಲ್ಲದೆ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಪುಪ್ಪಹಾರ ಹಾಕಿ ಜಯಘೋಷ ಹಾಕಿದರು.
ನಂತರ ನೆಹರೂ ಸರ್ಕಲ್‍ಗೆ ಆಗಮಿಸಿದ ಪಕ್ಷದ ನೂರಾರು ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಾ ನೆಹರೂ ವೃತ್ತವನ್ನು ಸುತ್ತಿ ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು ಮೋದಿಯವರಿಗೆ ಜಯಕಾರ ಹಾಕಿದರಲ್ಲದೆ ಪಟಾಕಿ ಸಿಡಿಸಿ ಸಂತಸ ವ್ಯಕ್ತ ಪಡಿಸಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಾರಂಭದ ಹಂತದಿಂದಲೇ ಮುನ್ನಡೆ ಸಾಧಿಸುತ್ತಾ ಬಂದ ಎ.ನಾರಾಯಣಸ್ವಾಮಿ ಕೊನೆಯ ಸುತ್ತಿನ ತನಕ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಹೋದರು. ಅಂತಿಮ ವಾಗಿ 80.067 ಮತಗಳಿಂದ ತಮ್ಮ ಸಮೀಪದ ಪ್ರತಿಸ್ವರ್ಧಿ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರನ್ನು ಸೋಲಿಸಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲೂ ಸಹ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸಿರುವುದು ವಿಶೇಷ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಲೀಡ್‍ಗಳಿಸಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸುವ ಮೂಲಕ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗುತ್ತಿದೆ ಎಂಬುವುದುನ್ನು ಸಾಬೀತು ಪಡಿಸಿದೆ. ಕಳೆದ 2008ರಲ್ಲಿ ಜನಾರ್ಥನ ಸ್ವಾಮಿ ಈ ಕ್ಷೇತ್ರವನ್ನು ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದು, ಈಗ ಎರಡನೇ ಬಾರಿಗೆ ಆನೇಕಲ್ ನಾರಾಯಣಸ್ವಾಮಿ ಬಿಜೆಪಿ ಗೆಲುವಿಗೆ ನಾಂದಿಯಾಗಿದ್ಧಾರೆ.
ಬಿಜೆಪಿ ಮುಖಂಡ ಎಂ.ಎಸ್.ಜಯರಾಮ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಇದು ಕಾಂಗ್ರೆಸ್ ಭದ್ರಕೋಟೆ ಎಂದು ಭಾವಿಸಿತ್ತು. ಆದರೆ, ಕೇವಲ ಒಂದು ವರ್ಷದೊಳಗೆ ಭಾರತೀಯ ಜನತಾ ಪಕ್ಷ ತನ್ನದೇಯಾದ ಸಂಘಟನೆಯಿಂದ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಹೆಚ್ಚು ಮತಗಳನ್ನು ಗಳಿಸಲು ಸಫಲವಾಗಿದೆ ಎಂದರು.
ನಗರಸಭಾ ಸದಸ್ಯ, ಬಿಜೆಪಿ ಮುಖಂಡ ಎಸ್.ಜಯಣ್ಣ ಮಾತನಾಡಿ, ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಾರಂಭದ ಹಂತದಲ್ಲೇ ಭಾರತೀಯ ಜನತಾ ಪಕ್ಷ ಕೇವಲ ಕಾರ್ಯಕರ್ತರ ಪರಿಶ್ರಮವನ್ನು ಆದರಿಸಿ ಕಾರ್ಯನಿರ್ವಹಿಸಿತು. ಏ.9ರಂದು ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ ಚಿತ್ರದುರ್ಗಕ್ಕೆ ಆಗಮಿಸಿದಾಗಲೇ ಪಕ್ಷಕ್ಕೆ ಜಯದ ಸುಳಿವು ದೊರಕಿತ್ತು. ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಅಭ್ಯರ್ಥಿ ನರೇಂದ್ರಮೋದಿಯವರನ್ನು ಟೀಕಿಸುತ್ತಲೇ ಮುನ್ನಡೆಸಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಲು ಕಾರಣವೆಂದರು.
ವಿಜಯೋತ್ಸವದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಬಾಳೆಮಂಡಿ ರಾಮದಾಸ್, ಹಿರಿಯ ಮುಖಂಡ ಸೂರನಹಳ್ಳಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಹೊಟ್ಟೆಪ್ಪನಹಳ್ಳಿ ಮಂಜುನಾಥ, ಕರೀಕೆರೆ ತಿಪ್ಪೇಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಟಿ.ಮಂಜುನಾಥ, ಜಿ.ಕೆ.ವೀರಣ್ಣ, ಹೊಟ್ಟೆಪ್ಪನಹಳ್ಳಿ ಆರ್.ಪ್ರಸನ್ನಕುಮಾರ್, ಮಂಜುನಾಥ, ಶ್ರೀನಿವಾಸ್, ಜಡೇಕುಂಟೆ ಕುಮಾರ್ ಮುಂತಾದವರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.