ಹಿರಿಯೂರು :

ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಭದ್ರಾಮೇಲ್ದಂಡೆ ಯೋಜನೆ ಮೂಲಕ ಶೀಘ್ರದಲ್ಲೇ ನೀರು ಹರಿಸಲು ಒತ್ತಾಯಿಸಿ ರೈತರು ನಡೆಸುವ ಎಲ್ಲ ರೀತಿಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂಬುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭರವಸೆ ನೀಡಿದರು.
ನಗರದ ತೇರುಮಲ್ಲೇಶ್ವರ ದೇಗುಲದ ಸಭಾಂಗಣದಲ್ಲಿ ವಾಣಿವಿಲಾಸ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೈತರ ಸಭಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭದ್ರಾಯೋಜನೆ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ವಾಣಿವಿಲಾಸ ಜಲಾಶಯದಿಂದ ಬೇರೆಯವರಿಗೆ ನೀರು ಕೊಟ್ಟಿರುವುದಕ್ಕೆ ಆಕ್ಷೇಪವಿಲ್ಲ. ಆದರೆ ಇಲ್ಲಿನ ಜನರ ಹಿತಾಸಕ್ತಿಗಳನ್ನು ಬಲಕೊಟ್ಟಿರುವುದಕ್ಕೆ ಬೇಸರವಿದೆ. ನೀರಿಗಾಗಿ ರೈತರು ನಡೆಸುವ ಹೋರಾಟದಲ್ಲಿ ನಾನಿರುವೆ ಎಂದು ಸ್ಪಷ್ಟಪಡಿಸಿದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ವಾಣಿವಿಲಾಸಕ್ಕೆ ಸೇರಬೇಕಿದ್ದ ಯಗಚಿ ನದಿಯನ್ನು ದೇವೇಗೌಡರು ಹೊಳೆನರಸೀಪುರಕ್ಕೆ ಕೊಂಡ್ಯೊಯ್ದರು. ಕೆ.ಹೆಚ್.ರಂಗನಾಥ್, ಡಿ.ಮಂಜುನಾಥ್, ಡಿ.ಸುಧಾಕರ್, ನೀರಿಗಾಗಿ ಗಂಭೀರ ಪ್ರಯತ್ನ ಮಾಡಲಿಲ್ಲ. ನೀವು ಇವರ ಸಾಲಿಗೆ ಸೇರಬಾರದು. ಅಧಿಕಾರಿಗಳ ಮಾತು ನಂಬಿ ಸುಮ್ಮನೆ ಕೂರಬಾರದು.ಒತ್ತಡ ತಂದರೆ ಭದ್ರಾ ಯೋಜನೆ ಮೂಲಕ ವಾಣಿವಿಲಾಸಕ್ಕೆ ನೀರು ತರಬಹುದು. ಉಳಿದಂತೆ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ಆರೇಳು ವರ್ಷಗಳು ಬೇಕಾಗುತ್ತದೆ ಎಂದು ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ತುಂಗಾದಿಂದ ಭದ್ರಾಕ್ಕೆ ನೀರು ತರುವ ಮೊದಲ ಪ್ಯಾಕೇಜ್ ಕಾಮಗಾರಿ ಕುಂಟುತ್ತ ಸಾಗಿದೆ. ರೂ.1500 ಕೋಟಿ ವೆಚ್ಚದ ಯೋಜನೆ ರೂ.18600 ಕೋಟಿಗೆ ಮುಟ್ಟಿದೆ. ವರ್ಷಕ್ಕೆ ನೂರಿನ್ನೂರು ಕೋಟಿ ಕೊಟ್ಟರೆ ಯೋಜನೆ ಪೂರ್ಣಗೊಳ್ಳಲು ಶತಮಾನ ಬೇಕಾಗುತ್ತದೆ. ಪ್ರಯುಕ್ತ ಜಲ ಸಂಪನ್ಮೂಲ ಸಚಿವರನ್ನು ಅಧಿಕಾರಿಗಳೊಟ್ಟಿಗೆ ಭೇಟಿ ಮಾಡಿ ಯೋಜನೆಯನ್ನು ಶೀಘ್ರ ಮುಗಿಸಲು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ನಗರಸಭೆ ಚುನಾವಣೆ ಮುಗಿದ ತಕ್ಷಣ ಮತ್ತೊಮ್ಮೆ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲು ಒಪ್ಪಿಗೆ ಸೂಚಿಸಲಾಯಿತು.ವಾಣಿವಿಲಾಸಕ್ಕೆ ನೀರು ಬರುವುದು ತಡವಾಗಿರುವುದಕ್ಕೆ ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಜ್ಯ ಬಿಜೆಪಿ ಒಬಿಸಿ ಘಟಕದ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ಎ.ಉಮೇಶ್, ವಿಶ್ವನಾಥ್, ಸಿದ್ದರಾಮಣ್ಣ, ಎಚ್.ಆರ್.ಶಂಕರ್, ಓಬನಾಯಕ, ಸಿದ್ದನಾಯಕ, ಬಬ್ಬೂರು, ಶ್ರೀಧರ್, ಎಂ.ಟಿ.ಸುರೇಶ್, ಕುಮಾರ್, ಕರಿಬಸಣ್ಣ, ಕುಮಾರ್, ದಸ್ತಗೀರ್‍ಸಾಬ್, ಈಶ್ವರ್, ಕುಮರೇಶ್, ರಂಗಪ್ಪಯಾದವ್, ದ್ಯಾಮಣ್ಣ, ಶಶಿಕಲಾ ರವಿಶಂಕರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
