ಲೋಕಸಭಾ ಫಲಿತಾಂಶ : ಶಾಸಕರಿಗೂ ಇದು ಎಚ್ಚರಿಕೆಯ ಸಂದೇಶ

ತುಮಕೂರು:

      2019 ರ ಲೋಕಸಭಾ ಚುನಾವಣಾ ಫಲಿತಾಂಶ ದೋಸ್ತಿ ಪಕ್ಷಗಳಿಗೆ ಭಾರಿ ಹೊಡೆತವನ್ನೇ ನೀಡಿದೆ. ಈ ಆಘಾತದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾದೀತು. ಈವರೆಗಿನ ಚುನಾವಣಾ ಫಲಿತಾಂಶಗಳನ್ನು ಅವಲೋಕಿಸಿದರೆ ಕಾಂಗ್ರೆಸ್ ಪಕ್ಷ ಇಂತಹ ಹೀನಾಯ ಸ್ಥಿತಿಗೆ ತಲುಪುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ.

       ಕಾಂಗ್ರೆಸ್ ಈ ಬಾರಿ ಎರಡು ಹೊಡೆತಗಳನ್ನು ಅನುಭವಿಸಬೇಕಾಗಿ ಬಂತು. ಮೈತ್ರಿ ಧರ್ಮ ಪಾಲನೆಯಿಂದಾಗಿ ಕೆಲವು ಕ್ಷೇತ್ರಗಳನ್ನು ಜೆಡಿಎಸ್‍ಗೆ ಧಾರೆ ಎರೆದದ್ದು ಒಂದಾದರೆ, ಇದೇ ಪ್ರಥಮ ಬಾರಿಗೆ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದೆ ಚುನಾವಣೆ ನಡೆದದ್ದು. ಅಂದರೆ, ಮೈತ್ರಿ ಅಭ್ಯರ್ಥಿಯ ಸ್ಪರ್ಧೆಯಿಂದಾಗಿ ಮತ ಯಂತ್ರಗಳಲ್ಲಿ ಕಾಂಗ್ರೆಸ್ ಚಿಹ್ನೆ ಉಳಿಯಲಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಕ್ಷವೊಂದು ತನ್ನ ಚಿಹ್ನೆಯಡಿ ಸ್ಪರ್ಧೆ ಮಾಡಲಾಗದಂತಹ ಅನಿವಾರ್ಯ ಸ್ಥಿತಿಗೆ ಈ ಬಾರಿ ಸಿಲುಕಿಬಿಟ್ಟಿತು. ಇದರಲ್ಲಿ ತುಮಕೂರು ಕ್ಷೇತ್ರವೂ ಒಂದಾಯಿತು.

       ಇಲ್ಲಿ ಮೂವರು ಜೆಡಿಎಸ್ ಶಾಸಕರು, ಒಬ್ಬರು ಕಾಂಗ್ರೆಸ್ ಶಾಸಕರಿದ್ದು, ಇವರೆಲ್ಲರ ಬಲದೊಂದಿಗೆ ಮಾಜಿ ಪ್ರಧಾನಿಯ ಹೆಸರು ಕೆಲಸ ಮಾಡುತ್ತದೆ ಎಂಬ ಲೆಕ್ಕಾಚಾರಗಳಿಗೆ ಪುಷ್ಠಿ ದೊರೆತಿಲ್ಲ. 2014ರ ಚುನಾವಣೆಯಲ್ಲಿ ಮುದ್ದಹನುಮೇಗೌಡರು ಪಡೆದಿದ್ದ ಮತಗಳು 4,29,868. ಎ.ಕೃಷ್ಣಪ್ಪ ಪಡೆದಿದ್ದ ಮತಗಳು 2,58,683. ಎಸ್.ಪಿ.ಎಂ. ಹಾಗೂ ಎ.ಕೃಷ್ಣಪ್ಪ ಪಡೆದಿದ್ದ ಒಟ್ಟು ಮತಗಳ ಸಂಖ್ಯೆ 6,88,551.

        ಈ ಬಾರಿ 1 ಲಕ್ಷಕ್ಕೂ ಹೆಚ್ಚು ಮತದಾರರ ಸಂಖ್ಯೆ ಹೆಚ್ಚಳವಾಗಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮತಗಳು ಸಮೀಕರಣವಾದರೆ 6 ಲಕ್ಷಕ್ಕೂ ಹೆಚ್ಚಿನ ಮತಗಳು ಬರುವ ಲೆಕ್ಕಾಚಾರಗಳಿದ್ದವು. ಆದರೆ ಇವೆಲ್ಲವೂ ಈಗ ಹುಸಿಯಾಗಿವೆ. ಒಂದೇ ಮಾತಿನಲ್ಲಿ ಹೇಳಬಹುದಾದರೆ ಮೈತ್ರಿಯಲ್ಲಿ ಒಗ್ಗಟ್ಟು ಸಾಧ್ಯವಾಗಿಲ್ಲ.

        ದೇವೇಗೌಡರ ಸೋಲಿಗೆ ಹಲವು ಕಾರಣಗಳನ್ನು ಹುಡುಕುತ್ತಾ ಹೋಗಬಹುದು. ಹೇಮಾವತಿ ನೀರಿನ ವಿಷಯದಿಂದ ಹಿಡಿದು ಹಲವು ಕಾರಣಗಳು ವಿಶ್ಲೇಷಣೆಗೆ ಒಳಪಡುತ್ತಲೇ ಮತ್ತೊಂದು ದಿಕ್ಕಿನಿಂದಲೂ ಯೋಚನೆ ಮಾಡುವುದಾದರೆ ಪಕ್ಕದ ಚಿತ್ರದುರ್ಗ ಕ್ಷೇತ್ರದಲ್ಲಿ ವಲಸಿಗರನ್ನು ಹರಸಿ ಆಶೀರ್ವದಿಸಿದಂತೆ ಇಲ್ಲಿನ ಮತದಾರರು ಉದಾರ ಮನಸ್ಸು ತೋರುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಪಿ.ಕೋದಂಡರಾಮಯ್ಯ, ಎ.ಕೃಷ್ಣಪ್ಪ ಮೊದಲಾದವರೇ ಸಾಕ್ಷಿ.

       ಚಿತ್ರದುರ್ಗ ಕ್ಷೇತ್ರದ ಚಿತ್ರಣವೇ ವಿಭಿನ್ನ. ಅಲ್ಲಿನ ಬಹುಪಾಲು ಸಂಸದರು ಹೊರಗಿನವರೇ ಆಗಿದ್ದಾರೆ. ಸಿ.ಪಿ.ಮೂಡಲಗಿರಿಯಪ್ಪ, ಪಿ.ಕೋದಂಡರಾಮಯ್ಯ, ಶಶಿಕುಮಾರ್, ಎನ್.ವೈ.ಹನುಮಂತಪ್ಪ, ಅಮೆರಿಕಾದಲ್ಲಿದ್ದ ಜನಾರ್ಧನಸ್ವಾಮಿ, ಮೂಡಿಗೆರೆಯ ಬಿ.ಎನ್.ಚಂದ್ರಪ್ಪ ಇವರೆಲ್ಲ ಹೊರಗಿನವರಾದರೂ ಅಲ್ಲಿನ ಮತದಾರರು ಸಂಸತ್‍ಗೆ ಆರಿಸಿ ಕಳುಹಿಸಿದ್ದಾರೆ. ಈ ಬಾರಿಯೂ ನಾರಾಯಣಸ್ವಾಮಿ ಅವರನ್ನು ಆರಿಸಿದ್ದಾರೆ.

      ತುಮಕೂರು ಜಿಲ್ಲೆಯ ಸ್ಥಿತಿಗತಿಗಳನ್ನು ಅವಲೋಕಿಸಿದರೆ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಭಾರಿಸಿದ್ದರು. ಶಿರಾ, ಪಾವಗಡ ವಿಧಾನಸಭಾ ಕ್ಷೇತ್ರಗಳನ್ನೊಳಗೊಳ್ಳುವ ಚಿತ್ರದುರ್ಗ ಕ್ಷೇತ್ರದಲ್ಲಿ ಬಿ.ಎನ್.ಚಂದ್ರಪ್ಪ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ಕುಣಿಗಲ್ ವ್ಯಾಪ್ತಿಯಲ್ಲಿ ಡಿ.ಕೆ.ಸುರೇಶ್ ಹಾಗೂ ತುಮಕೂರು ಕ್ಷೇತ್ರದಿಂದ ಎಸ್.ಪಿ.ಮುದ್ದಹನುಮೇಗೌಡ ಅವರುಗಳು ಭರ್ಜರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದರು. ಈ ಬಾರಿ ಜಿಲ್ಲೆಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡು ಕುಣಿಗಲ್ ಕ್ಷೇತ್ರ ಒಳಗೊಳ್ಳುವ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರವೇ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಾಪಾಡಿಕೊಂಡಿದೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಉಸಿರಾಡುತ್ತಿದೆ.

        ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಹೆಚ್ಚು ಬಾರಿ ಕಾಂಗ್ರೆಸ್, ಆನಂತರದಲ್ಲಿ ಬಿಜೆಪಿಯೇ ಅಧಿಕಾರ ಹಿಡಿದಿದೆ. ಒಮ್ಮೆ ಮಾತ್ರ ಸಿ.ಎನ್.ಭಾಸ್ಕರಪ್ಪ ಜೆಡಿಎಸ್‍ನಿಂದ ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ ಜೆಡಿಎಸ್ ಇಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಜೆಡಿಎಸ್ ಪಕ್ಷದಿಂದ ಅನೇಕರು ಸೋತು ಹೋಗಿದ್ದಾರೆ. ಅಲ್ಲಿ ಸೋತವರು ಕಾಂಗ್ರೆಸ್ ಪಕ್ಷಕ್ಕೆ ಬಂದು ಗೆದ್ದಿರುವ ಉದಾಹರಣೆಗಳಿವೆ.

        2009 ರ ಉದಾಹರಣೆಯನ್ನೇ ತೆಗೆದುಕೊಂಡರೆ ಜೆಡಿಎಸ್‍ನಿಂದ ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್‍ನಿಂದ ಪಿ.ಕೋದಂಡರಾಮಯ್ಯ, ಬಿಜೆಪಿಯಿಂದ ಜಿ.ಎಸ್.ಬಸವರಾಜು ಸ್ಪರ್ಧಿಸಿದ್ದರು. 21445 ಮತಗಳ ಅಂತರದಿಂದ ಜಿ.ಎಸ್.ಬಸವರಾಜು ಅವರು ಮುದ್ದಹನುಮೇಗೌಡ ಅವರನ್ನು ಪರಾಭವಗೊಳಿಸಿದ್ದರು.

       2013 ರಲ್ಲಿ ಕುಣಿಗಲ್‍ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುದ್ದಹನುಮೇಗೌಡರಿಗೆ ಬಿ. ಫಾರಂ ಸಿಕ್ಕಿತಾದರೂ ಕೊನೇ ಘಳಿಗೆಯಲ್ಲಿ ತಪ್ಪಿ ಹೋಗಿದ್ದರಿಂದ ಮುದ್ದಹನುಮೇಗೌಡರು ಕಾಂಗ್ರೆಸ್ ಪಕ್ಷಕ್ಕೆ ಜಿಗಿದರು. 2014ರ ಚುನಾವಣೆಯಲ್ಲಿ ಮುದ್ದಹನುಮೇಗೌಡರು 74041 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಅಂದರೆ, 2009 ರಲ್ಲಿ ಇದೇ ಮುದ್ದಹನುಮೇಗೌಡರು ಜೆಡಿಎಸ್‍ನಿಂದ ಸೋತಿದ್ದರು. 2014 ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

     2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಜಿ.ಎಸ್.ಬಸವರಾಜು, ಜೆಡಿಎಸ್‍ನಿಂದ ಎ.ಕೃಷ್ಣಪ್ಪ ಸ್ಪರ್ಧಿಸಿದ್ದರಾದರೂ ತುಮಕೂರಿನ ಮತದಾರರು ಜೆಡಿಎಸ್ ಹಾಗೂ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದರು. ಈ ಬಾರಿ ಮೈತ್ರಿ ಸಂಗಮದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಮತಗಳು ಮತ್ತು ಜೆಡಿಎಸ್‍ನ ಮತಗಳು ಸಮೀಕರಣಗೊಂಡು ಜೆಡಿಎಸ್ ಅಭ್ಯರ್ಥಿ ಬಹುಮತಗಳ ಮುನ್ನಡೆಯಲ್ಲಿ ಜಯಶೀಲರಾಗಲಿದ್ದಾರೆಂಬ ಎಣಿಕೆಗಳನ್ನು ಇಲ್ಲಿನ ಮತದಾರ ಹುಸಿಗೊಳಿಸಿದ್ದಾನೆ. ಜಾತಿ ಸಮೀಕರಣದ ಲೆಕ್ಕಾಚಾರಗಳು ಸಂಪೂರ್ಣ ತಲೆಕೆಳಕಾಗಿವೆ.

      ಈ ಬಾರಿ ಗಮನಿಸಬೇಕಾದ ವಿಶೇಷತೆ ಎಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಮತದಾರ ಆಯ್ಕೆ ಮಾಡಿದ್ದನೋ ಆ ಅಭ್ಯರ್ಥಿಯ ವಿರುದ್ಧ ಲೋಕಸಭಾ ಅಭ್ಯರ್ಥಿಗೆ ಮತಗಳು ಬಂದಿರುವುದನ್ನು ಗಮನಿಸಬಹುದು. 2014 ಹಾಗೂ 2019ರ ಚಿತ್ರವಣನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.
2014 ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಕಡೆ ಜೆಡಿಎಸ್, ಮೂರರಲ್ಲಿ ಕಾಂಗ್ರೆಸ್, ಒಂದು ಕಡೆ ಬಿಜೆಪಿ ಶಾಸಕರಿದ್ದರು.

     ಆದರೂ ಜೆಡಿಎಸ್ ಶಾಸಕರಿದ್ದ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕೊರಟಗೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು. ತುಮಕೂರು ನಗರದಲ್ಲಿ ಕಾಂಗ್ರೆಸ್, ಗುಬ್ಬಿಯಲ್ಲಿ ಜೆಡಿಎಸ್, ತಿಪಟೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಅಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ಮುನ್ನಡೆ ಸಾಧಿಸಿರಲಿಲ್ಲ. ಮಧುಗಿರಿ, ಕೊರಟಗೆರೆ, ತುರುವೇಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದು ಉಳಿದ ಎಲ್ಲ ಕಡೆ ಮೂರನೇ ಸ್ಥಾನದಲ್ಲಿತ್ತು.

      2019 ರಲ್ಲಿ ನಾಲ್ಕು ಬಿಜೆಪಿ, ಮೂರು ಜೆಡಿಎಸ್, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೆ ಅಧಿಕಾರದಲ್ಲಿರುವ ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗೆ ವ್ಯತಿರಿಕ್ತ ಫಲಿತಾಂಶ ಬಂದಿರುವುದನ್ನು ಗಮನಿಸಬಹುದು. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಅಲ್ಲಿ ಜೆಡಿಎಸ್ ಅಭ್ಯರ್ಥಿ 6988 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅದೇ ರೀತಿ ತುರುವೇಕೆರೆಯಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ. ಅಷ್ಟರ ಮಟ್ಟಿಗೆ ಪರಮೇಶ್ವರ ಅವರ ಹೆಸರನ್ನು ಉಳಿಸಲಾಗಿದೆ. ಮುಖಭಂಗದಿಂದ ಅವರು ತಪ್ಪಿಸಿಕೊಂಡಿದ್ದಾರೆ.

       ಕೊರಟಗೆರೆ ಹಾಗೂ ಮಧುಗಿರಿ ಕ್ಷೇತ್ರದ ಚಿತ್ರಣವಂತೂ ಊಹಿಸಲು ಅಸಾಧ್ಯ. ಕೊರಟಗೆರೆಯಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಜೆಡಿಎಸ್ ಶಾಸಕರಾಗಿದ್ದವರು. ಹಾಲಿ ಉಪ ಮುಖ್ಯಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ಇಲ್ಲಿಂದಲೇ ಶಾಸಕರಾಗಿ ಆಯ್ಕೆಯಾದವರು. ದೇವೇಗೌಡರ ಗೆಲುವಿನ ಜವಾಬ್ದಾರಿ ಹೊತ್ತವರಂತೆಯೇ ಕಾರ್ಯನಿರ್ವಹಿಸಿದರು. ಸುಮಾರು 10 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೂ ಕೊರಟಗೆರೆಯಲ್ಲಿ 4270 ಮತಗಳ ಅಂತರದಿಂದ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ.

      ಮಧುಗಿರಿಯಲ್ಲಿ ಹಾಲಿ ಶಾಸಕ ಜೆಡಿಎಸ್‍ನ ವೀರಭದ್ರಯ್ಯ ಇದ್ದಾರೆ. ಆದರೂ ಅಲ್ಲಿನ ಪರಿಸ್ಥಿತಿ ಅತ್ಯಂತ ಶೋಚನೀಯ ಎನ್ನಿಸಿದೆ. 10584 ಮತಗಳ ಅಂತರದಿಂದ ಇಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿರುವುದನ್ನು ಗಮನಿಸಿದರೆ ಹಾಲಿ ಶಾಸಕರ ವಿರೋಧಿ ಅಲೆಯೂ ಇಲ್ಲಿ ಎದ್ದು ಕಾಣುತ್ತದೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿರ್ಲಿಪ್ತತೆ ಬಹುಪಾಲು ಬಿಜೆಪಿಗೆ ವರದಾನವಾದಂತಿದೆ. ಈ ಭಾಗದಲ್ಲಿ ಬಿಜೆಪಿ ಅಸ್ತಿತ್ವ ಇಲ್ಲದಿದ್ದರೂ ಬಿಜೆಪಿಯತ್ತ ಮತಗಳು ವಾಲಿರುವುದರ ಹಿಂದಿನ ಕಾರಣಗಳೇನು ಎಂಬುದರ ಲೆಕ್ಕಾಚಾರಗಳು ಬಹಿರಂಗವಾಗಿಯೇ ನಡೆಯುತ್ತಿವೆ.

     ತಿಪಟೂರು, ತುಮಕೂರು ನಗರದಲ್ಲಿ ಬಿಜೆಪಿ ಶಾಸಕರಿದ್ದು, ಈ ಎರಡೂ ಕಡೆ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದು, ಹಾಲಿ ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿರುವ ಎಸ್.ಆರ್.ಶ್ರೀನಿವಾಸ್ ಅವರು ನಿರೀಕ್ಷಿತ ಮಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತಗಳನ್ನು ತಂದುಕೊಡಲು ಸಾಧ್ಯವಾಗಿಲ್ಲ. ಇಲ್ಲಿ ಕಳೆದ ಬಾರಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಈ ಬಾರಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

      ಒಟ್ಟಾರೆ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ ಎಂಬ ಅಂಶವನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಅಲ್ಲದೆ, ಹಾಲಿ ಶಾಸಕರಿಗೆ ಕೆಲವು ಕಡೆ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link