ಇನ್ಹೇಲರ್ಸ್‍ನಿಂದ ಮಾತ್ರ ಅಸ್ತಮ ನಿಯಂತ್ರಣ

ದಾವಣಗೆರೆ:

    ಬಾಯಿ ಇಂದ ಗಾಳಿಯ ರೂಪದಲ್ಲಿ ಸೇವಿಸಬಹುದಾದ ಔಷಧಿಗಳಿಂದ(ಇನ್ಹೇಲರ್ಸ್‍ನಿಂದ) ಮಾತ್ರ ಅಸ್ತಮ ನಿಯಂತ್ರಣ ಆಗಲಿದೆ ಎಂದು ಹಾಸನದ ಶ್ವಾಸಕೋಶ ತಜ್ಞ ವೈದ್ಯೆ ಡಾ.ದೀಪ್ತಿ ಕೃಷ್ಣನ್ ಪ್ರತಿಪಾದಿಸಿದರು.

     ನಗರದ ಪದ್ಮಶ್ರೀ ಚಿಂದೋಡಿಲೀಲಾ ಕಲಾ ಕ್ಷೇತ್ರದಲ್ಲಿ ಭಾನುವಾರ, ವಿಶ್ವ ಅಸ್ತಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಸ್ತಮ ಸಮ್ಮೇಳನ, ಉಚಿತ ತಪಾಸಣೆ ಶಿಬಿರ ಹಾಗೂ ನಗೆ ಹಬ್ಬ ಕಾರ್ಯಕ್ರಮವನ್ನು ಅಸ್ತಮ ಪೀಡಿತೆಗೆ ಇನ್ಹೇಲರ್ಸ್ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

     ಬಹುತೇಕ ಅಸ್ತಮ ಪೀಡಿತರು ನಮಗೆ ಇನ್ಹೇಲರ್ಸ್ ಕೊಡಬೇಡಿ, ಬೇರೆ ರೂಪದ ಔಷಧ ಕೊಡಿ ಎಂಬ ಮೊಂಡು ವಾದ ಮಾಡುತ್ತಾರೆ. ಇನ್ಹೇಲರ್ಸ್ ಬಿಟ್ಟು, ಬೇರೆ ಔಷಧ ಕೊಟ್ಟರೆ, ಅಸ್ತಮ ನಿಯಂತ್ರಣ ಕಷ್ಟಸಾಧ್ಯವಾಗಲಿದೆ. ಅಸ್ತಮದಿಂದ ಬಳಲುತ್ತಿರುವವರಿಗೆ ಇನ್ಹೇಲರ್ಸ್ ನೀಡಿದರೆ, ಸಿದಾ ಶ್ವಾಸನಾಳ ಪ್ರವೇಶಿಸಿ, ಅಸ್ತಮದ ವಿರುದ್ಧ ಹೋರಾಡುತ್ತದೆ. ಹೀಗಾಗಿ ಅಸ್ತಮ ರೋಗಿಗಳು ಕಡ್ಡಾಯವಾಗಿ ಇನ್ಹೇಲರ್ಸ್‍ಗಳನ್ನು ತೆಗೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

      ಅಸ್ತಮ ಸಂಪೂರ್ಣ ವಾಸಿಯಾಗುವ ರೋಗವಲ್ಲ. ಆದರೆ, ಇದು ಹೆಚ್ಚು ಉಲ್ಭಣಗೊಳ್ಳದಂತೆ ನಿಯಂತ್ರಿಸಬಹುದಾಗಿದೆ. ಇದಕ್ಕೆ ಮುಂಜಾಗ್ರತೆ ವಹಿಸುವುದು ಅತ್ಯವಶ್ಯವಾಗಿದೆ. ಆದ್ದರಿಂದ ಅಸ್ತಮ ಪೀಡಿತರು ದೂಳು, ಹೊಗೆ, ಘಾಟು ಹಾಗೂ ಧೂಮಪಾನದಿಂದ ಅಂತರ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು.

     ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಶ್ವಾಸನಾಳಗಳ ರಂದ್ರ ದೊಡ್ಡದಾಗಿರುತ್ತವೆ. ಆದರೆ, ಅಸ್ತಮಕ್ಕೆ ವ್ಯಕ್ತಿ ತುತ್ತಾದಾಗ ಶ್ವಾಸನಾಳದಲ್ಲಿ ಕಫಾ ಕಟ್ಟಿಕೊಂಡು, ರಂದ್ರ ಚಿಕ್ಕದಾಗಿ ಬಿಡುತ್ತವೆ. ಹೀಗಾಗಿ ಎದೆ ಬಿಗಿದಂತಾಗುವುದು. ದೂಳಿಗೆ ಹೋದರೆ, ಒಮ್ಮೆ ಆರಂಭವಾದ ಕೆಮ್ಮು, ಸೀನು ತಕ್ಷಣಕ್ಕೆ ನಿಲ್ಲದಿರುವುದು ಅಸ್ತಮದ ಲಕ್ಷಣಗಳಾಗಿವೆ. ಅಸ್ತಮ ಪೀಡಿತರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಾವೇ ಮಾಡಿರುವ ವಾಯು ಮಾಲೀನ್ಯವನ್ನು ನಿಯಂತ್ರಿಸಲು ಮನೆಯ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸಬೇಕು. ಹಾಗೂ ಜಿರಳೆಯಿಂದಲೂ ಅಸ್ತಮ ಬರುವ ಸಾಧ್ಯತೆ ಇರುವುದರಿಂದ ಮನೆಯಲ್ಲಿ ಜಿರಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

      ಅಸ್ತಮದ ಲಕ್ಷಣಗಳು ಕ್ಯಾನ್ಸರ್, ದಮ್ಮು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಒಳ್ಳೆಯ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿ, ಶ್ವಾಸಕೋಶದ ಊತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೂ ಅಸ್ತಮ ಇರುವುದು ಖಾತರಿಯಾದರೆ, ವೈದ್ಯರ ಸಲಹೆಯಂತೆ ಔಷದೋಪಚಾರ ಪಡೆಯಬೇಕೆಂದು ಸಲಹೆ ನೀಡಿದರು.

      ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಕಿರಣ ತಜ್ಞ ಡಾ.ರವಿ, ಪರಿಸರ ಮಾಲಿನ್ಯ, ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಆಲೋಚನಾ ಲಹರಿಯಿಂದ ಅಸ್ತಮ ಬರುವ ಸಾಧ್ಯತೆವಿದ್ದು, ಅಸ್ತಮವು ತನ್ನ ಕಬಂದಕ ಬಾಹುಗಳನ್ನು ಎಲ್ಲೆಡೆಯೂ ಚಾಚಿಕೊಂಡಿದೆ. ಆದ್ದರಿಂದ ತಜ್ಞ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಸಲಹೆ, ಮಾರ್ಗದರ್ಶನ ಪಡೆದು, ಔಷಧಿ ಸ್ವೀಕರಿಸುವ ವಿಧಾನವನ್ನು ಅರಿತು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಸ್ತಮ ನಿಯಂತ್ರಣ ಮಾಡಿಕೊಳ್ಳಬೇಕೆಂದು ಹೇಳಿದರು.

        ಈ ಸಂದರ್ಭದಲ್ಲಿ ಸರ್ ಎಂ.ವಿ. ಕಾಲೇಜಿನ ಕಾರ್ಯದರ್ಶಿ ಎಸ್.ಜೆ.ಶ್ರೀಧರ್, ಉದ್ಯಮಿ ಎಚ್.ಎಂ. ಬಸವರಾಜಯ್ಯ ಹಾಗೂ ವಿಕಿರಣ ತಜ್ಞ ಡಾ.ರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

        ಹಾಸ್ಯ ಪ್ರಸ್ತುತಿಗಾರ ಗಂಗಾವತಿ ಪ್ರಾಣೇಶ್, ಕನ್ನಡ ಶಾಯಿರಿ ಕವಿ ಅಸಾದುಲ್ಲ ಬೇಗ್, ಹಾಸ್ಯ ವಾಗ್ಮಿ ಮಹದೇವ್ ಸತ್ತಿಗೆರಿ, ನಗೆ ಭಾಷಣಕಾರರಾದ ನರಸಿಂಹ ಜೋಷಿ, ಬಸವರಾಜ್ ಮಾಮನೆ ನಗೆ ಹಬ್ಬ ನಡೆಸಿಕೊಡುವ ಮೂಲಕ ಸಭಿಕರನ್ನು ರಂಜಿಸಿದರು.
ಶ್ವಾಸಕೋಶ ಹಾಗೂ ಉಸಿರಾಟ ತೊಂದರೆಗಳ ಸಲಹಾ ವೈದ್ಯ ಡಾ.ಎನ್.ಹೆಚ್.ಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು|| ಅನಘ ಆನಂದ್ ಭಾಂಭುರೆ ಪ್ರಾರ್ಥಿಸಿದರು. ಬಿ.ಆರ್.ಸುಬ್ರಹ್ಮಣ್ಯ ಸ್ವಾಗತಿಸಿದರು. ಎಸ್.ನಾರಾಯಣರಾವ್ ನಿರೂಪಿಸಿದರು. ಪುಟ್ಟು ಸಮರ್ಥ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link