ಚಳ್ಳಕೆರೆ
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ವೈದ್ಯರ ಮೇಲಿದ್ದು, ಇದನ್ನು ಪ್ರತಿಯೊಬ್ಬ ವೈದ್ಯರೂ ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದರು.
ಅವರು, ಭಾನುವಾರ ಮಧ್ಯಾಹ್ನ ಇಲ್ಲಿನ ಸಾರ್ವಜನಿಕರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವಿವಿಧ ವಾರ್ಡ್‍ಗಳಿಗೆ ತೆರಳಿ ರೋಗಿಗಳೊಂದಿಗೆ ಚಿಕಿತ್ಸೆಯ ಬಗ್ಗೆ ವಿವರ ಪಡೆದರು. ಇಲ್ಲಿನ ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿ ಡಾ.ಸತೀಶ್ ಆದಿಮನಿಯೊಂದಿಗೆ ಮಾತನಾಡುತ್ತಾ, ತುರ್ತು ಚಿಕಿತ್ಸಾ ಘಟಕದಲ್ಲಿರುವ ರೋಗಿಗಳಿಗೆ ಯಾವ ಯಾವ ಹಂತದಲ್ಲಿ ಚಿಕಿತ್ಸೆ ನೀಡಿರುತ್ತೀರಿ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳನ್ನು ತಡಮಾಡದಂತೆ ಅವರ ಆರೋಗ್ಯವನ್ನು ಪರಿಶೀಲಿಸಬೇಕು ಅನಗತ್ಯವಾಗಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ನೆಪದಲ್ಲಿ ಕಳುಹಿಸಿಕೊಡದಂತೆ ಸೂಚನೆ ನೀಡಿದರು. ಪ್ರಸ್ತುತ ಆಸ್ಪತ್ರೆಯಲ್ಲಿರುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ರೋಗಿಗಳಿಗೆ ಗುಣಾತ್ಮಕ ಚಿಕಿತ್ಸೆ ನೀಡುವಂತೆ ತಿಳಿಸಿದರು.
ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೊಂದಿಗೆ ಮಾತನಾಡಿದ ಡಾ.ಸಿ.ಎಲ್.ಪಾಲಾಕ್ಷ ವೈದ್ಯರು ಮತ್ತು ಇಲಾಖೆಯ ಸಿಬ್ಬಂದಿ ವರ್ಗ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಬಗ್ಗೆ ಅವರಿಂದ ಮಾಹಿತಿ ಪಡೆದರು. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಸಹ ನಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ವೈದ್ಯರು ಮತ್ತು ಸಿಬ್ಬಂದಿ ವರ್ಗ ಚಿಕಿತ್ಸೆ ನೀಡಿರುತ್ತಾರೆ. ಆಸ್ಪತ್ರೆಗೆ ಬಂದ ಕೆಲವೇ ಗಂಟೆಗಳಲ್ಲಿ ನಾವು ಗುಣಮುಖರಾಗಿದ್ದೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಕ್ಷೇತ್ರ ಕಿರಿಯ ಆರೋಗ್ಯಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಎನ್.ಪ್ರೇಮಕುಮಾರ್, ಚಂದ್ರಶೇಖರ್, ಸುಧಾಕರರೆಡ್ಡಿ, ಭಾಸ್ಕರ್, ಮಂಜುನಾಥ, ರಮೇಶ್, ಬಸವರಾಜು, ಭಾಷ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ