ಬೆಂಗಳೂರು
ನಗರದ ನಾಲ್ಕು ದಿಕ್ಕುಗಳಲ್ಲೂ ಸುಮಾರು 150 ಕೋಟಿ ವೆಚ್ಚದಲ್ಲಿ 4 ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಬ್ರಿಟಿಷರ ಕಾಲದ ವಿಕ್ಟೋರಿಯಾ, ಬೌರಿಂಗ್, ಮಲ್ಲೇಶ್ವರ ಸಾರ್ವಜನಿಕ ಆಸ್ಪತ್ರೆ ಬಿಟ್ಟರೆ, ಎಲ್ಲಿಯೂ ಉತ್ತಮ ಸೌಲಭ್ಯದ ಸರ್ಕಾರಿ ಆಸ್ಪತ್ರೆ ಇಲ್ಲದಿರುವುದರಿಂದ ರೊಗಿಗಳ ಸಂಖ್ಯೆ ಹೆಚ್ಚಾಗಿ ಸೂಕ್ತ ಚಿಕಿತ್ಸೆಗೆ ಪರದಾಡು ವಂತಾಗಿದ್ದು ಇದನ್ನು ನಿವಾರಿಸಲು 4 ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದರು.
ಬೆಂಗಳೂರು ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಅಪಘಾತಗಳು ಸಂಭವಿಸಿದಾಗ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ ಅದಕ್ಕೂ ಹೊಸ ಆಸ್ಪತ್ರೆಗಳ ಆರಂಭದಿಂದ ನೆರವಾಗಲಿದೆ ಎಂದು ಹೇಳಿದರು.
ಜಯನಗರದ ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಿಸಿರುವ ಎಂ.ಆರ್.ಐ ಹಾಗೂ ಮಾಡ್ಯುಲಾರ್ ಶಸ್ತ್ರಚಿಕಿತ್ಸೆ ವಿಭಾಗವನ್ನು ಗುರುವಾರ ಅವರು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾಗಿ ಸರ್ಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಇಂದು ಜಯದೇವ ಸಂಜಯಗಾಂಧಿ ಸೇರಿದಂತೆ ರಾಜ್ಯದ ಅನೇಕ ಆಸ್ಪತ್ರೆಗಳು, ಜನರಿಗೆ ಉತ್ತಮ ಸೇವೆ ಸಲ್ಲಿಸಿ, ಹೆಸರುಗಳಿಸಿವೆ.
ಹೀಗಾಗಿ, ಪ್ರತಿಯೊಬ್ಬರು ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಸವಲತ್ತುಗಳನ್ನು ಪಡೆಯುವಂತಾಗಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಉದ್ದೇಶಪೂರ್ವಕವಾಗಿ ಜನರನ್ನು ದಿಕ್ಕು ತಪ್ಪಿಸಿ ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರು ಎಚ್ಚರ ವಹಿಸುವ ಅಗತ್ಯವಿದೆ.ಅಷ್ಟೇ ಅಲ್ಲದೆ, ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ಮಾಡಿದರು.
ಪ್ರೋತ್ಸಾಹಧನ
ಆಸ್ಪತ್ರೆಗಳಲ್ಲಿ ಉತ್ತಮ ಹಾಗೂ ಪ್ರಾಮಾಣಿಕ ಸೇವೆಸಲ್ಲಿಸುವುದನ್ನು ಗುರುತಿಸಿ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಶೀಘ್ರದಲ್ಲಿಯೇ ಇನ್ಸೆಂಟಿವ್ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.ಪ್ರಾಮಾಣಿಕ ಸೇವೆ ಹಿನ್ನಲೆ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಪ್ರೋತ್ಸಾಹ ಧನ ನೀಡಬೇಕೆಂದು ಆರೋಗ್ಯ ಸಚಿವರು, ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಜಾರಿಗೊಳಿಸಲು ಬದ್ಧವಾಗಿದ್ದೇನೆ ಎಂದು ಹೇಳಿದರು.
ಆರೋಗ್ಯ ಸಚಿವ ಶಿವಾನಂದ.ಎಸ್.ಪಾಟೀಲ್, ಶಾಸಕರಾದ ಉದಯ್ ಗರುಡಾಚಾರ್, ಹಾಗಸ್ ಭೀಮಾ ನಾಯಕ, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಸಂಜಯ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ಚಂದ್ರಶೇಖರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೀದ್ ಆಖ್ತಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.