ಎದೆಗುಂದದೆ ಪಕ್ಷ ಸಂಘಟಿಸುವತ್ತ ಮುಂದಾಗಿ

ತುಮಕೂರು:

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪರಾಮರ್ಶೆ ಹಾಗೂ ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‍ಗಾಂಧಿ ನೀಡಿರುವ ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸುವ ಸಲುವಾಗಿ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯಿತು.

     ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಅವರು ದೇಶಾದ್ಯಂತ ಈ ಬಾರಿ ಬಿಜೆಪಿ ವಿರೋಧಿ ಅಲೆಯೇ ಇತ್ತು. ಜನವಿರೋಧಿ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿತ್ತು. ನೋಟು ಅಮಾನೀಕರಣದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಆನಂತರ ಜಿ.ಎಸ್.ಟಿ. ಜಾರಿಯಿಂದಾಗಿ ವ್ಯಾಪಾರೋದ್ಯಮ ವಲಯ ನೆಲ ಕಚ್ಚಿದ್ದು ಇವೆಲ್ಲವೂ ಆಡಳಿತ ವಿರೋಧಿ ಅಲೆಗಳೇ ಆಗಿದ್ದವು. ಬಿಜೆಪಿ ಸರ್ಕಾರವು ಹೊಸದಾಗಿ ಜನರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ತರಲಿಲ್ಲ. ಆದರೆ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆಯೇ ಜನರನ್ನು ಗೆಲ್ಲಲು ರಾಷ್ಟ್ರಭಕ್ತಿ, ದೇಶಭಕ್ತಿಯ ಭಜನೆಗೆ ಬಿಜೆಪಿ ಮುಂದಾಯಿತು.

     ನಮ್ಮ ದೇಶದಲ್ಲಿ ಕೋಮುವಾದ ಹಾಗೂ ದೇಶಭಕ್ತಿ ಎಂಬ ಎರಡು ಅಂಶಗಳ ಮೂಲಕ ಜನರ ಮನಸ್ಸನ್ನು ಬೇರೆಡೆ ಸೆಳೆದು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದು ಹೆಚ್ಚು ದಿನ ಉಳಿಯುವುದಿಲ್ಲ. ತಾತ್ಕಾಲಿಕ ಗೆಲುವು ಆಗಿರಬಹುದು. ಮುಂದಿನ ದಿನಗಳಲ್ಲಿ ಜನತೆಗೆ ಎಲ್ಲವೂ ಅರ್ಥವಾಗುತ್ತದೆ. ಆದ್ದರಿಂದ ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗಳು ಬರಲಿದ್ದು, ಒಗ್ಗಟ್ಟಿನಿಂದ ಶಕ್ತಿ ಪ್ರದರ್ಶಿಸಿ ಪಕ್ಷವನ್ನು ಹೆಚ್ಚು ಸಂಘಟಿಸಬೇಕಿದೆ ಎಂದರು.

      ಮುಖಂಡ ಮುರಳೀಧರ ಹಾಲಪ್ಪ ಮಾತನಾಡಿ ರಾಹುಲ್‍ಗಾಂಧಿಯವರು ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದ ನಂತರವೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಈಗಿನ ಪರಿಸ್ಥಿತಿಯೇ ಬೇರೆ. ಅದಕ್ಕೆ ರಾಹುಲ್ ಗಾಂಧಿ ಕಾರಣರಲ್ಲ. ಬಿಜೆಪಿಯು ರಾಷ್ಟ್ರದಲ್ಲಿ ದೇಶಪ್ರೇಮ ಮತ್ತು ಸೈನಿಕರ ಹೆಸರಿನಲ್ಲಿ ಓಟು ಪಡೆದು ಅಧಿಕಾರಕ್ಕೆ ಬಂದಿದೆ. ಇವೆರಡೂ ಅಸ್ತ್ರಗಳು ಇಲ್ಲದಿದ್ದರೆ ಬಿಜೆಪಿಗೆ ಪೂರಕವಾಗುವ ಯಾವುದೇ ಅಂಶಗಳು ಇರಲಿಲ್ಲ. ಆದ್ದರಿಂದ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಧೈರ್ಯದಿಂದ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಹರಿಸಬೇಕು ಎಂದರು.

ಬಿಜೆಪಿಯನ್ನು ಮೆಟ್ಟಿ ನಿಲ್ಲುವ ಶಕ್ತಿ ರಾಹುಲ್‍ಗಾಂಧಿ ಅವರಿಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿಯೂ ಅವರೇ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಬೇಕಿದೆ ಎಂದು ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮುಖಂಡರುಗಳಾದ ಟಿ.ಎಸ್.ನಿರಂಜನ್, ಗೀತಾರುದ್ರೇಶ್, ಇಕ್ಬಾಲ್ ಅಹಮದ್, ಅತೀಕ್ ಅಹಮದ್, ತರುಣೇಶ್, ಮರಿಚನ್ನಮ್ಮ, ಅಟೋರಾಜು, ತು.ಬಿ.ಮಲ್ಲೇಶ್ ಸೇರಿದಂತೆ ವಿವಿಧ ಮುಖಂಡರುಗಳು ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link