ಹರಿಹರ:
ಕರ್ಮಕ್ಕೆ ಅಂಟಿಕೊಳ್ಳದೆ ಮಾಡುವ ಕಾಯಕ ಶ್ರೇಷ್ಠವಾದದ್ದು ಎಂದು ಯಲವಟ್ಟಿ ಗ್ರಾಮದ ಸಿದ್ದಾರೂಢ ಮಠದ ಯೋಗಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಯಲವಟ್ಟಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಅಮಾವಸ್ಯೆ ಸತ್ಸಂಗ ಉದ್ಘಾಟಿಸಿ ಮಾತನಾಡಿದ ಅವರು, ಪುಣ್ಯ, ಕರ್ಮ ಪ್ರಾಪ್ತಿಯಾಗುತ್ತದೆ ಎಂದು ಸದ್ಗುಣಗಳೊಂದಿಗೆ ಬದುಕುವುದು ಉತ್ತಮವೇ ಆಗಿದೆ, ಆದರೆ ಕರ್ಮದ ನಿರೀಕ್ಷೆ ಇಟ್ಟುಕೊಳ್ಳದೆ ಮಾಡುವ ಕಾಯಕ ಶ್ರೇಷ್ಠವಾದದ್ದೆಂದರು.
ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯೂ ಕಾಯಕ ಮಾಡುತ್ತದೆ. ಕಾಯಕದಿಂದ ನಾವು ಏನೆ ಪಡೆದಿದ್ದರೂ ಅದು ಇಲ್ಲಿಂದಲೆ, ನಾವು ಭೂಮಿ ಬಿಟ್ಟು ಹೋಗುವಾಗ ಅದನ್ನೆಲ್ಲಾ ಇಲ್ಲಿಯೆ ಬಿಟ್ಟು ಹೋಗುತ್ತವೆ. ಆದರೆ ಮಾಡಿದ ಸತ್ಕಾರ್ಯಗಳು ನಮ್ಮ ರಕ್ಷಣೆಗೆ ನಮ್ಮೊಂದಿಗೆ ಸದಾ ಇರುತ್ತವೆ ಎಂದರು.
ಗ್ರಾಮದ ಯುವ ಪ್ರವಚನಕಾರ ಡಿ.ಸಿದ್ದೇಶ್ ಮಾತನಾಡಿ, ಆಸ್ತಿ, ಅಂತಸ್ತಿನಿಂದ ಸುಖ ಸಿಗುತ್ತದೆ ಎಂದರೆ ತಪ್ಪು. ಸುಖದಿಂದಿರಲು ಸಂಪತ್ತು ಒಂದು ಪೂರಕ ಅಂಶವಾಗುತ್ತದೆ. ಆದರೆ ಅಲ್ಪ ದುಡಿಮೆ, ಸಂಪತ್ತಿನಲ್ಲಿಯೂ ನಾವು ಬದುಕಿನ ಗರಿಷ್ಠ ಸುಖ ಪಡೆಯಲು ಸಾಧ್ಯ. ಇದು ನಾವು ಬದುಕುವ ಶೈಲಿಯನ್ನು ಅವಲಂಬಿಸಿದೆ ಎಂದರು.
ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ಕುಂದೂರು ಮಂಜಪ್ಪ ಮಾತನಾಡಿ, ಮಾಡಬಾರದ್ದನ್ನು ಮಾಡಿ, ದೇವರ ಹುಂಡಿಗೆ ಹಣ ಹಾಕುವುದು, ವಿಶೇಷ ಪೂಜೆ ಸಲ್ಲಿಸುವುದರಿಂದ ಉಪಯೋಗವಾಗದು. ಮನುಷ್ಯರಾಗಿ ಹುಟ್ಟಿದ ನಾವು ಮಾನವೀಯ ಗುಣ, ತತ್ವಗಳನ್ನು ಮೈಗೂಡಿಸಿಕೊಂಡು ಬದುಕಿದರೆ ಅದೆ ದೇವರಿಗೆ ಪ್ರೀತಿದಾಯಕವಾಗುತ್ತದೆ ಎಂದರು.
ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಕುಂದೂರು ಮಂಜಪ್ಪರನ್ನು ಸತ್ಕರಿಸಲಾಯಿತು. ಕುಂದೂರು ಮಹೇಶ್ವರಪ್ಪ, ಡಿ.ಜಿ.ಮುರುಗೇಶಪ್ಪ, ಜಿ.ಬಸಪ್ಪ ಮಾಸ್ತರ್, ಜಿ.ಆಂಜನೇಯ, ಸಂಜೀವಪ್ಪ, ವೀರನಗೌಡ, ಕುಬೇರಪ್ಪ, ಶೇಖರಪ್ಪ, ಸುಶೀಲಮ್ಮ ಮಲ್ಲೇಶಪ್ಪ ಬಾವಿಕಟ್ಟೆ ಮಾತನಾಡಿದರು. ನಂತರ ದಾಸೋಹ ವ್ಯವಸ್ಥೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








