ಚಿತ್ರದುರ್ಗ :
ಶ್ರೀಮಠದಲ್ಲಿ ನಡೆಯುವ ಅಂತರ್‍ಜಾತಿ ಅಂತರ್‍ಧರ್ಮೀಯ ವಿವಾಹಗಳು ಇಂದು ಜಾತಿ ಜಾತಿಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಮಹತ್ವದ ಪಾತ್ರವಹಿಸಿ ಜಾತಿಪದ್ಧತಿ ಆಚರಣೆಯನ್ನು ಸಮಾಜದಲ್ಲಿ ಕಡಿಮೆಗೊಳಿಸಿವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಬಸವಕೇಂದ್ರ ಶ್ರೀಮುರುಘಾಮಠ, ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಹಾಗು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಶ್ರೀಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು
ಅನುಭವ ಮಂಟಪದ ಮಹತ್ವ ಒಗ್ಗೂಡಿಸುವಿಕೆ ಅಂದರೆ ಜಾತಿ ಜಾತಿಗಳನ್ನು ಒಟ್ಟುಗೂಡಿಸುವುದು ಜೊತೆಗೆ ಮಾನವ ಮಾನವರ ನಡುವೆ ಸಾಮರಸ್ಯತೆಯನ್ನು ಬೆಸೆಯುವುದು, ಹೃದಯ ಹೃದಯಗಳ ನಡುವೆ ಸಾಮರಸ್ಯತೆ ಬೆಳೆಸುವುದು. ಇದನ್ನು 900 ವರ್ಷಗಳ ಹಿಂದೆಯೇ ಬಸವಾದಿ ಶರಣರು ಮಾಡಿದ್ದರು. ಈ ಸಂಬಂಧದಲ್ಲಿ ಶಾಂತಿ ಸಾಮರಸ್ಯತೆ ಇರುತ್ತದೆ. ಒಗ್ಗೂಡುವಿಕೆಯಿಂದ ಜೀವನ ಆನಂದಮಯವಾಗುತ್ತದೆ ಎಂದರು
12ನೇ ಶತಮಾನದಲ್ಲೇ ಬಸವಾದಿ ಪ್ರಮಥರು ಹತ್ತಾರು ಸಮಾಜಮುಖಿ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಿದ್ದರು. ಅಂತಹ ಎಲ್ಲ ಕಾರ್ಯಗಳನ್ನು ಶ್ರೀಮಠವು ನಡೆಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಆಗ ಜಡ್ಡುಗಟ್ಟಿದ ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಅಂತರ್‍ಜಾತಿ ವಿವಾಹಗಳನ್ನು ನಡೆಸಲಾಯಿತು. ಸಾಮಾಜಿಕ ಸಮಾನತೆಗೆ ಒತ್ತು ನೀಡಲಾಯಿತು ಎಂದರು
ಭೀಭತ್ಸವಾದ, ಅಮಾನವೀಯವಾದ, ಹೀನಾಯವಾದ ಅಸ್ಪೃಶ್ಯರ ಸ್ಥಾನವನ್ನು ಎತ್ತರಿಸಲು ಬಸವಣ್ಣನವರು ಭಿನ್ನ ಜಾತಿಗೆ ಸೇರಿದ ಮಧುವರಸ ಮತ್ತು ಹರಳಯ್ಯನ ಮಕ್ಕಳಿಗೆ ಮದುವೆ ಮಾಡಿದರು. ಹೀಗೆ ಜಾತಿ ಸಾಮರಸ್ಯತೆಗೆ ಅಡಿಗಲ್ಲು ಹಾಕಿದವರು ಬಸವಣ್ಣ. ಅದೇ ತೆರನಾಗಿ ಇಂದು 6 ಅಂತರ್‍ಜಾತಿ ವಿವಾಹಗಳು ಸೇರಿದಂತೆ 45 ಜೋಡಿಗಳು ಈ ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಈ ಮೂಲಕ ಸಾಮಾಜಿಕ ಸಾಮರಸ್ಯತೆ, ಸಮಾನತೆ, ಮಾನವೀಯ ಕಾರ್ಯಗಳನ್ನು ಶ್ರೀಮಠವು ಮಾಡುತ್ತಿದೆ ಎಂದರು.
ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ವೃಕ್ಷ ಸಂತಾನ ಹೆಚ್ಚಾಗಬೇಕಿದೆ. ಎಲ್ಲರು ಮರಗಿಡಗಳನ್ನು ತಪ್ಪದೇ ಬೆಳೆಸಿ. ಶ್ರೀಮಠವು ಈ ದಿನಾಚರಣೆಯನ್ನು ಪ್ರತಿ ಜೋಡಿಗಳಿಂದಲೂ ಅತಿಥಿಗಳಿಂದಲೂ ಗಿಡ ನಡೆಸುವುದರ ಮುಖೇನ ಅತ್ಯಂತ ಪ್ರಾಯೋಗಿಕವಾಗಿ ಆಚರಣೆ ಮಾಡುತ್ತಿದೆ ಎಂದು ನುಡಿದರು.
ಗೌರವ ಉಪಸ್ಥಿತಿ ವಹಿಸಿದ್ದ ಮಾತೆ ಬಸವೇಶ್ವರಿ ಮಾತಾಜಿ ಬಸವಧಾಮ ಅತ್ತಿವೇರಿ ಇವರು, ಸಾಮಾನ್ಯ ಜನರು ಮದುವೆ ಮಾಡುವ ಧಾವಂತದಲ್ಲಿ ಸಾಲದ ಸುಳಿಗೆ ಸಿಕ್ಕಿ ನಲುಗಿ ಹೋಗುತ್ತಾರೆ. ಜೀವನಪೂರ್ತಿ ಬಡ್ಡಿ ಹಣಕ್ಕಾಗಿ ದುಡಿಯುತ್ತಾರೆ. ಆ ಮೂಲಕ ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಾರೆ. ಆದರೆ ಶ್ರೀಮಠದ ಈ ಕಾರ್ಯಕ್ರಮ ಅಂತಹವರಿಗೆ ವರವಾಗಿದೆ ಎಂದರು
ಸಾಮಾಜಿಕ ತಾರತಮ್ಯತೆಗಳನ್ನು ಹೋಗಲಾಡಿಸುವಲ್ಲಿ, ನೂತನ ವಧುವರರ ಸಂಸಾರದಲ್ಲಿ ಸಂಸ್ಕಾರವನ್ನು ಮೂಡಿಸುವಲ್ಲಿ, ಅವರಲ್ಲಿ ಹೊಂದಾಣಿಕೆ ಬೆಳೆಸುವಲ್ಲಿ ಈ ಸರಳ ಸಾಮೂಹಿಕ ಮಹೋತ್ಸವ ನಿಜವಾಗಿ ಮಹತ್ವದ್ದು. ಗಂಡ ಹೆಂಡತಿಯರು ಕ್ಷುಲ್ಲಕ ಕಾರಣಗಳಿಗೆ ಜಗಳವಾಡದೆ ತಾಳ್ಮೆಯಿಂದ ನೆಮ್ಮದಿಯುತವಾದ ಮಾದರಿ ಬದುಕನ್ನು ನಡೆಸಿ ಎಂಬ ಕಿವಿಮಾತು ಹೇಳಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಚಿತ್ರದುರ್ಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಇವರು ಮಾತನಾಡುತ್ತ, ಈ ಕಲ್ಯಾಣ ಮಹೋತ್ಸವದಲ್ಲಿ ಪರಿಸರ ದಿನಾಚರಣೆ ಆಚರಿಸುತ್ತಿರುವುದು ವಿಶೇಷ. ಮಾನವ ಭೂಮಿ ಮೇಲೆ ಜೀವಿಸಿ ಪರಿಸರದಿಂದ ಲಾಭ ಪಡೆದು ಪರಿಸರದಲ್ಲಿ ಅನೇಕ ಮಾಲಿನ್ಯಗಳನ್ನು ಮಾಡುತ್ತಿದ್ದಾನೆ. ಆ ಮಾಲಿನ್ಯ ನಿವಾರಣೆ ಸರ್ಕಾರದ ಕೆಲಸ ಎಂದು ಜನ ಬೊಟ್ಟು ಮಾಡುತ್ತಾರೆ. ಆದರೆ ಅದು ಎಲ್ಲರ ಕರ್ತವ್ಯ. ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಡಬೇಕು ಎಂದರು
ಪ್ರತಿನಿತ್ಯ, ಪ್ರತಿಕ್ಷಣ ನಾವು ಇಂಗಾಲದ ಡೈ ಆಕ್ಸೈಡ್ ಬಿಡುತ್ತೇವೆ. ಅದರ ಶುದ್ಧೀಕರಣಕ್ಕಾದರೂ ನಾವೆಲ್ಲ ತಪ್ಪದೆ 10 ಸಸಿಗಳನ್ನು ನೆಟ್ಟು ಮರವಾಗಿ ಬೆಳೆಸಿ ಮಾಡಿದ ಮಾಲಿನ್ಯದ ತಪ್ಪಿಗೆ ಪ್ರಾಯಶ್ಚಿತಪಡೋಣ ಎಂದು ನುಡಿದರು.ವೇದಿಕೆ ಮೇಲೆ ನಿವೃತ್ತ ನ್ಯಾಯಾಧೀಶ ಹೆಚ್.ಎಂ. ಭರತೇಶ್, ಕೆ.ವಿ.ಶಿವಕುಮಾರ್ ನಿರ್ದೇಶಕರು ಕೆಪಿಟಿಸಿಎಲ್ ಬೆಂಗಳೂರು, ಸಾಹಿತಿ ಕುಂ.ವೀರಭದ್ರಪ್ಪ ದಂಪತಿಗಳು, ಕೆಪಿಟಿಸಿಎಲ್ ಅಧಿಕಾರಿ ಗುರುಮಲ್ಲಯ್ಯ ಇತರರು ಆಸೀನರಾಗಿದ್ದರು. ಎಲ್ಲ ವಧುವರರಿಗೆ ತಾಳಿ-ವಸ್ತ್ರ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಾಹಿತಿ ಕುಂ.ವೀ. ಪುತ್ರ ಪ್ರವರ ಕುಂ.ವೀ. ಹಾಗು ಕುಮಾರಿ ಅಂಬಿಕಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಲ್ಯಾಣ ಮಹೋತ್ಸವ ಮುಗಿದ ಬಳಿಕ ನೂತನ ವಧುವರರು, ಅತಿಥಿಗಳು ಎಲ್ಲರೂ ಸಸಿ ನೆಡುವುದರ ಮುಖಾಂತರ ಪರಿಸರ ದಿನಾಚರಣೆಗೆ ಮುರುಘಾವನದಲ್ಲಿ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಕೃಪಾಸಾಗರ್ ನಿರ್ದೇಶನದ ಸಾರ್ವಜನಿಕರಲ್ಲಿ ವಿನಂತಿ ಸಿನೆಮಾ ಪೋಸ್ಟರ್‍ನ್ನು ಶರಣರು ಬಿಡುಗಡೆಗೊಳಿಸಿದರು.
ಭೈರಮಂಗಲದ ರಾಮೇಗೌಡ, ಪ್ರಕಾಶ್ ಕಂಬತ್ತಳ್ಳಿ, ಕೃಷ್ಣಮೂರ್ತಿ ಸ್ವಾನ್ ಪ್ರಿಂಟರ್ಸ್ ಹಾಗೂ ಕೆಪಿಟಿಸಿಎಲ್‍ನ ಹಿರಿಯ ಅಧಿಕಾರಿಗಳಾದ ಗುರಯ್ಯಮಠ್, ಕೊಟ್ರೇಶ್ ತಳಸ್ಥೆ ಮತ್ತು ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಎನ್.ತಿಪ್ಪಣ್ಣ ಇತರರಿದ್ದರು. ಪಿಆರ್‍ಓ ಪ್ರದೀಪ್‍ಕುಮಾರ್ ಜಿ.ಟಿ. ಸ್ವಾಗತಿಸಿದರು. ಜ್ಞಾನಮೂರ್ತಿ ವಂದಿಸಿದರು. ಪ್ರೊ. ಸಿ.ವಿ. ಸಾಲಿಮಠ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
