ಹಾನಗಲ್ಲ :
ಕರ್ನಾಟಕ ರಾಜ್ಯ ರೈತ ಸಂಗ ಹಾಗೂ ಹಸಿರು ಸೇನೆ ಸಂಘಟನೆಯಲ್ಲಿ ಹಾವೇರಿಯಲ್ಲಿ ನಡೆಯುವ ಹುತಾತ್ಮ ದಿನಾಚರಣೆಯಲ್ಲಿ ಹಾನಗಲ್ಲ ತಾಲೂಕಿನಿಂದ ಸಾವಿರ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವರು ಎಂದು ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ತಿಳಿಸಿದರು.
ಹಾನಗಲ್ಲಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಾವೇರಿಯಲ್ಲಿ 11 ವರ್ಷಗಳ ಹಿಂದೆ ರೈತರ ಮೇಲೆ ನಡೆದ ಗೋಲಿಬಾರ್ ಘಟನೆಯ ದಿನವನ್ನು ಹುತಾತ್ಮದಿನವನ್ನಾಗಿ ನಮ್ಮ ರೈತ ಸಂಘ ಆಚರಿಸುತ್ತಿದೆ. ಬೇಡಿಕೆ ಕೇಳುವ ರೈತರ ಮೇಲೆ ಗೋಲಿಬಾರ್ ಮಾಡುವ ರೈತ ವಿರೋಧಿ ನೀತಿಯನ್ನು ಅಂದಿನ ಸರಕಾರ ಹಾಗೂ ಅಧಿಕಾರಿಗಳು ಮಾಡಿದ್ದಾರೆ. ಯಾವುದೇ ಸರಕಾರಗಳು ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದ ಅವರು, ರೈತರ ಸಮಸ್ಯೆಗಳಿಗೆ ಹೋರಾಟ ಅನಿವಾರ್ಯವಾಗಿದೆ.
ಜೂನ 10 ರಂದು ಹಾವೇರಿಯಲ್ಲಿ ನಡೆಯುವ ಹುತಾತ್ಮ ದಿನಾಚರಣೆ ಮತ್ತು ತುಂಗಭದ್ರಾ ನದಿಯಿಂದ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಲಾಗುತ್ತದೆ ಎಂಧರು.ಇದರೊಂದಿಗೆ ಬರಪರಿಹಾರ ಬಿಡುಗಡೆ ಮಾಡಬೇಕು. ರೈತರ ಕೃಷಿಸಾಲ ಸಂಪೂಣ್ ಮನ್ನಾ ಮಾಡಬೇಕು. ಕೂಡಲೇಮೋಡ ಬಿತ್ತನೆ ಆರಂಭಿಸಬೇಕು. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ ಮತ್ತು ಹಾಲು ಒಕ್ಕೂಟ ಆರಂಭಿಸಬೇಕು ಎಂಬ ಬೇಡಿಕೆಗಳೊಂದಿಗೆ 11 ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಬ್ಯಾಡಗಿ ತಾಲೂಕಾಧ್ಯಕ್ಷ ರುದ್ರಗೌಡ ತಾಡಣ್ಣನವರ, ಮಾಲತೇಶ ಪರಪ್ಪನವರ, ಎಂ.ಎಂ.ಬಡಗಿ, ವಾಸುದೇವ ಕಮಾಟಿ, ಮಹಲಿಂಗಪ್ಪ ಅಕ್ಕಿವಳ್ಳಿ ಮೊದಲಾದವರು ಈ ಸಂದರ್ಬದಲ್ಲಿದ್ದರು.