ಶಾಸಕರಿಂದ ಸಿಸಿ ರಸ್ತೆಗೆ ಗುದ್ದಲಿ ಪೂಜೆ..!!

ಗುಬ್ಬಿ

     ನದಿಗಳ ಜೋಡಣೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಸದರು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಎಲ್ಲಾ ರೀತಿಯ ನದಿ ತಿರುವು ಯೋಜನೆಗಳನ್ನು ಜಾರಿಗೊಳಿಸಲಿ. ಕೇವಲ ಪತ್ರಿಕೆಗಳಿಗೆ ಹೇಳಿಕೆ ನೀಡುವುದರಿಂದ ನೀರಿನ ಸಮಸ್ಯೆ ಮತ್ತು ನದಿ ಜೋಡಣೆಯಂತಹ ಯೋಜನೆಗಳು ಪೂರ್ಣಗೊಳ್ಳುವುದಿಲ್ಲ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ಪಟ್ಟಣದ ಸುಭಾಷ್ ನಗರದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬರಿ ನೀರಿನ ವಿಚಾರ ಇಟ್ಟುಕೊಂಡೆ ಗೆಲುವು ಪಡೆದಿರುವ ಸಂಸದರು ಗಂಗಾ, ನೇತ್ರಾವತಿ, ಭದ್ರಾ ನದಿ ಜೋಡಣೆ ಮಾಡುತ್ತೇನೆ ಎಂದು ಪತ್ರಿಕೆಗಳಿಗೆ ಹೇಳುವ ಬದಲು ಕೆಲಸ ಮಾಡಿ ತೋರಿಸಲಿ ಎಂದು ತಿಳಿಸಿದರು.

      ಜಿಲ್ಲೆಗೆ ಹೇಮಾವತಿ ನೀರು ಹರಿದಿಲ್ಲ ಎನ್ನುವ ಸಂಸದರು ಕನಿಷ್ಠ ಜ್ಞಾನವಿಲ್ಲದೆ ಮಾತನಾಡುತ್ತಾರೆ. ಮಾಹಿತಿಬೇಕು ಎಂದರೆ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಪಡೆದು ಮಾತನಾಡಬೇಕು. ಅದನ್ನು ಬಿಟ್ಟು ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸಲಿ. ನಾನು ಏನು ಹೇಳಿಕೆ ನೀಡಿದ್ದೇನೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಾತನಾಡಲಿ. ಅದನ್ನು ಬಿಟ್ಟು ನನಗೆ ತಿಳುವಳಿಕೆ ಇಲ್ಲ ಎಂದು ಹೇಳುತ್ತಾರೆ.

        ನನಗೆ ತಿಳುವಳಿಕೆ ಇಲ್ಲದಿದ್ದರೆ 4 ಬಾರಿ ನಾನು ಗೆಲ್ಲುತ್ತಿರಲಿಲ್ಲ. ಯಾವ, ಯಾವ ನದಿಯ ತಿರುವು ಮಾಡಬೇಕು ಎಂದು ಕೊಂಡಿದ್ದಾರೋ ಅವೆಲ್ಲವನ್ನು ಮಾಡಲಿ, ಊರಿಗೊಂದು ಕೆರೆ ಎಲ್ಲಾ ಕೆರೆಗಳಿಗೆ ನೀರು ಬಿಡುಸ್ತೀನಿ ಅಂತ ಕಾಲ ಕಳೆಯುವುದನ್ನು ಬಿಟ್ಟು ಕೇಂದ್ರ ಸರಕಾರದಿಂದ ಹೆಚ್ಚಿನ ಹಣ ತಂದು ಕೆಲಸ ಮಾಡಲಿ ಎಂದು ಸಂಸದರಿಗೆ ಸವಾಲೆಸೆದರು.

      ರಾಜ್ಯದ ಸಮ್ಮಿಶ್ರ ಸರಕಾರ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿವರೆಗೂ ಒಳ್ಳೆಕೆಲಸ ಮಾಡುತ್ತೇವೆ. ಮೂರು ಪಕ್ಷದ ಶಾಸಕರಿಗೂ ಚುನಾವಣೆಗೆ ಹೋಗಲು ಮನಸಿಲ್ಲ. ನಮ್ಮ ಸರಕಾರ ಸದೃಢವಾಗಿದ್ದು ನಮ್ಮ ಶಾಸಕರು ಸರಕಾರ ಉಳಿಸಲು ಎಲ್ಲಾ ತ್ಯಾಗಕ್ಕೂ ಸಿದ್ದವಾಗಿದ್ದೇವೆ ಎಂದು ತಿಳಿಸಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್‍ರ ಮನವೊಲಿಸಲಾಗಿದೆ. ನೀವೆ ಮುಂದುವರಿಬೇಕು ಎಂದು ಮನವಿ ಮಾಡಿದ್ದು ಕಾಲಾವಕಾಶ ಕೇಳಿದ್ದಾರೆ ಮತ್ತೆ ಮುಂದುವರಿಯುತ್ತಾರೆ ಎಂಬ ಅಶಾಭಾವನೆ ನಮಗೆ ಇದೆ ಎಂದು ತಿಳಿಸಿದರು.

       ಪಟ್ಟಣದ ಸುಭಾಷ್ ನಗರದ ಕಾಲೋನಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಚಿಂತನೆ ನಡೆಸಿದ್ದು ಮುಂದಿನ ವರ್ಷದಲ್ಲಿ ಪಟ್ಟಣದ ಕಾಲೋನಿಗಳಿಗೆ ಟಾರ್ ರಸ್ತೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

        ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಕುಮಾರ್, ಸಿ.ಮೋಹನ್, ಮಂಗಳಮ್ಮ, ಶ್ವೇತ, ರೇಣುಕ ಪ್ರಸಾದ್, ಮಮತಾ, ಪ.ಪಂ ಮಾಜಿ ಸದಸ್ಯ ನರಸಿಂಹಮೂರ್ತಿ, ಮುಖಂಡ ಮಂಜುನಾಥ್, ಗುತ್ತಿಗಾದಾರ ಶಿವಪ್ಪ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap