ಬೆಂಗಳೂರು:
ಸಮ್ಮಿಶ್ರ ಸರ್ಕಾರದ ನೂತನ ಸಚಿವರ ಪದಗ್ರಹಣ ಸಮಾರಂಭ ಬುಧವಾರ ಬೆಳಗ್ಗೆ 10.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಿಗದಿಯಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಬೆಳಗ್ಗೆ ಜೆ.ಡಿ.ಎಸ್. ವರಿಷ್ಠ ಹೆಚ್.ಡಿ.ದೇವೇಗೌಡ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಸಂಪುಟ ವಿಸ್ತರಣೆಯಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು, ಅತೃಪ್ತ ಶಾಸಕರ ನಡೆ ಇವೆಲ್ಲವುಗಳ ಬಗ್ಗೆಯೂ ಇಬ್ಬರೂ ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಅತೃಪ್ತರ ಮನವೊಲಿಸುತ್ತಲೇ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಕಳೆದ ಒಂದು ವಾರದಿಂದ ಸಮಾಲೋಚನೆ ನಡೆಸುತ್ತಲೇ ಅಂತೂ ಸಂಪುಟ ವಿಸ್ತರಣೆಗೆ ದೋಸ್ತಿ ನಾಯಕರು ಮುಂದಾಗಿರುವುದು ಬಿಜೆಪಿ ವಲಯದಲ್ಲಿ ಅಸಹನೆಯನ್ನಂತೂ ಉಂಟು ಮಾಡಿದೆ.
ಸದ್ಯಕ್ಕೆ ಕೆಲವರನ್ನಷ್ಟೇ ಸಂಪುಟಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಜೆಡಿಎಸ್ ಕೋಟಾದಿಂದ ಒಂದು ಹಾಗೂ ಕಾಂಗ್ರೆಸ್‍ನಲ್ಲಿ ಉಳಿದಿರುವ ಖಾತೆಯನ್ನು ತುಂಬಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಎರಡೂ ಸ್ಥಾನಗಳನ್ನು ಪಕ್ಷೇತರರಿಗೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಪಕ್ಷೇತರ ಶಾಸಕರಾಗಿರುವ ಆರ್.ಶಂಕರ್ ಮತ್ತು ನಾಗೇಶ್ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಶಂಕರ್ ಅವರಿಗೆ ಕಾಂಗ್ರೆಸ್‍ನಿಂದ ಈ ವಿಷಯವನ್ನು ಅಧಿಕೃತವಾಗಿ ತಿಳಿಸಲಾಗಿದ್ದು, ನಾಗೇಶ್ ಅವರಿಗೆ ಸಚಿವ ಸ್ಥಾನದ ಅಧಿಕೃತ ಮುದ್ರೆ ಒತ್ತಬೇಕಿದೆ. ಕಾಂಗ್ರೆಸ್‍ನಲ್ಲಿ ಅತೃಪ್ತರ ಪಡೆ ಹೆಚ್ಚಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆಯೂ ಗಮನ ಹರಿಸಲಾಗಿದೆ. ಅದೇ ರೀತಿ ಜೆಡಿಎಸ್‍ನಲ್ಲಿಯೂ ಅತೃಪ್ತರಿದ್ದು, ಇವರನ್ನು ಸಮಧಾನಗೊಳಿಸುವುದೇ ಮೈತ್ರಿ ಮುಖಂಡರಿಗೆ ದೊಡ್ಡ ತಲೇನೋವಾಗಿದೆ.
ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆಯೇ ಅಲ್ಲಲ್ಲಿ ಕೆಲವರಿಂದ ಅಪಸ್ವರ ಕೇಳಿಬರಲಾರಂಭಿಸಿದ್ದು, ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರುವ ಏಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಇಂದು ರಾಜಧಾನಿಗೆ ಆಗಮಿಸುತ್ತಿದ್ದಾರೆ.
ದೋಸ್ತಿ ಪಕ್ಷಗಳ ಹಿರಿಯ ನಾಯಕರುಗಳ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಯಾಗಿಸುವ ಯತ್ನಕ್ಕೆ ಮುಂದಾಗಿದ್ದಾರೆ.
ಸೂಕ್ಷ್ಮ ಪರಿಸ್ಥಿತಿಯನ್ನು ಅರಿತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ಸ್ಥಿರತೆ ಮತ್ತು ರಕ್ಷಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ದೇವೇಗೌಡರೊಂದಿಗೆ ಸಮಾಲೋಚಿಸಿದ್ದಾರೆ. ಸದ್ಯಕ್ಕೆ ಪಕ್ಷೇತರರಿಬ್ಬರಿಗೆ ಸಚಿವ ಸ್ಥಾನ ನೀಡುತ್ತೇವೆ. ಡಿಸೆಂಬರ್‍ನಲ್ಲಿ ಮತ್ತೆ ಸಂಪುಟ ಪುನರ್ರಚನೆ ಮಾಡಿ ಇತರೆ ಶಾಸಕರಿಗೆ ಸಚಿವ ಪಟ್ಟ ನೀಡುವ ಭರವಸೆಯನ್ನು ಕೈ ಮುಖಂಡರು ನೀಡಿದ್ದಾರೆನ್ನಲಾಗಿದೆ. ಆದರೆ ಇದನ್ನು ನಂಬುವ ಸ್ಥಿತಿಯಲ್ಲಿ ಕಾಂಗ್ರೆಸ್ ಅಸಮಾಧಾನಿತ ಶಾಸಕರಿಲ್ಲ. ಈಗ ಕೈತಪ್ಪಿ ಹೋದರೆ ಮುಂದೆ ಏನೋ ಎಂಬ ಆತಂಕ ಅವರನ್ನು ಕಾಡತೊಡಗಿದೆ.
ಈ ನಡುವೆ ಬಿಜೆಪಿ ಮಾತ್ರ ತನ್ನ ಪಾಡಿಗೆ ಆಪರೇಷನ್ ಗಾಳ ಮುಂದುವರಿಸುತ್ತಲೇ ಇದೆ. ಇದರೊಳಗೆ ಸಿಲುಕಿರುವ ಹಲವರು ಒಂದು ಹೆಜ್ಜೆ ಈ ಕಡೆ, ಮತ್ತೊಂದು ಹೆಜ್ಜೆ ಆ ಕಡೆ ಎನ್ನುವಂತೆ ಅಡ್ಡಗೋಡೆಯ ಮೇಲೆ ದೀಪ ಇಟ್ಟವರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ರಮೇಶ್ ಜಾರಕಿ ಹೊಳಿ ಸೇರಿದಂತೆ ಕೆಲವು ನಾಯಕರು ಮೌನ ವಹಿಸಿದ್ದಾರೆ. ಆದರೆ ಈ ಮೌನ ಶಾಶ್ವತವಾಗಿ ಮುಂದುವರೆಯುವುದೋ ಅಥವಾ ಮತ್ತೆ ಬಂಡಾಯ ಏಳುವರೋ ಎಂಬ ಆತಂಕ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳ ಕೆಲವರು ತೀವ್ರ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಗೆ ಅಪಸ್ವರಗಳು ಬೆಂಕಿಯ ಜ್ವಾಲಾಗ್ನಿಯಾಗಿ ಕಾಣಿಸಿಕೊಳ್ಳುತ್ತಿವೆ. ತುಮಕೂರಿನಲ್ಲಿ ಕಾಂಗ್ರೆಸ್ ಎರಡು ಬಣಗಳಾಗಿರುವುದು, ಇತರೆ ಕಡೆಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಕೆಲವರು ಮಾತನಾಡುವುದು, ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರು ಎಂಬ ಮಾತುಗಳು ಕೇಳಿಬರುತ್ತಿರುವುದು ಇತ್ಯಾದಿ ಬೆಳವಣಿಗೆಗಳು ಆತಂಕವನ್ನಂತು ಉಂಟು ಮಾಡಿವೆ.
ಸರ್ಕಾರಕ್ಕೆ ಅಪಾಯವಿಲ್ಲ
ಸಚಿವ ಸಂಪುಟ ವಿಸ್ತರಣೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಸುಭದ್ರವಾಗಿ 4 ವರ್ಷಗಳನ್ನು ಪೂರೈಸಲಿದೆ. ಸಣ್ಣಪುಟ್ಟ ಅಸಮಾಧಾನಗಳ ನಡುವೆಯೂ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ. ರಮೇಶ್ ಜಾರಕಿ ಹೊಳೆ ಅವರಿಂದಲೂ ಸರ್ಕಾರಕ್ಕೆ ಯಾವುದೇ ಬಾಧಕವಿಲ್ಲ.-ಸತೀಶ್ ಜಾರಕಿಹೊಳಿ, ಅರಣ್ಯ ಸಚಿವ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ