ಚಳ್ಳಕೆರೆ
ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಮರಣಶಾಸನವಾಗಿರುವುದನ್ನು ವಿರೋಧಿಸಿ, ರೈತ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ, ಕಳೆದ ವರ್ಷದ ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ ನಡೆಸಿದ ರಾಷ್ಟ್ರೀಯ ಹೆದ್ದಾರಿ ಬಂದ್ ಚಳವಳಿ ಯಶಸ್ಸು ಕಂಡಿದ್ದು, ಪ್ರತಿಭಟನೆಗೀಳಿದ ರೈತರನ್ನು ಬಂಧಿಸುವ ಮೂಲಕ ಶಾಂತಿಯುತ ಚಳವಳಿಗೆ ಪೊಲೀಸ್ ಇಲಾಖೆ ಸಹಕರಿಸಿತು.
ಪ್ರಾರಂಭದ ಹಂತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ನೇತೃತ್ವದಲ್ಲಿ ಸುಮಾರು 200ಕ್ಕೂ ಹೆಚ್ಚು ರೈತರು ಚಳ್ಳಕೆರೆಯಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗುತ್ತಾ ಇಲ್ಲಿನ ನೆಹರೂ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ವಾಹನ ತಡೆದು ಮುಷ್ಕರ ಪ್ರಾರಂಭಿಸಿದರು. ಆದರೆ, ಪೊಲೀಸ್ ಇಲಾಖೆ ಸಾಂಕೇತಿಕವಾಗಿ ರಸ್ತೆ ತಡೆಗೆ ಕೆಲವು ನಿಮಿಷಗಳು ಮಾತ್ರ ಅವಕಾಶ ನೀಡಿದ್ದು, ರೈತರು ರಸ್ತೆ ತಡೆಯನ್ನು ಮುಂದುವರೆಸಿದ ಹಿನ್ನೆಲೆಯಲ್ಲಿ ಸಾವರ್ವಜನಿಕರ ಹಿತದೃಷ್ಠಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷ ಎನ್.ತಿಮ್ಮಣ್ಣ ಚಳವಳಿ ನಿರತ ರೈತರನ್ನು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ, ಪ್ರಾರಂಭದ ಹಂತದಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಿ ರೈತರ ಮನೆಗಳಿಗೆ ಸಾಲಮುಕ್ತ ಋಣಪತ್ರ ಕಳುಹಿಸುವ ಭರವಸೆ ನೀಡಿದ್ದರು. ಪ್ರತಿಯೊಂದು ಹಂತದಲ್ಲೂ ನಮ್ಮ ಸರ್ಕಾರ ರೈತರ ಪರ ಸರ್ಕಾರವಾಗಿದ್ದು, ರಾಜ್ಯದ ರೈತರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಆದರೆ, ರೈತರ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಕವಾಗುವಂತಹ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲೇಇಲ್ಲ. ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಯಾದ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಹಣ ನೀಡಲಿಲ್ಲ. ರೈತರ ಸಾಲಗಳ ಬಗ್ಗೆ ಬ್ಯಾಂಕ್ನಿಂದ ನೋಟಿಸ್ಗಳು ಆಗಮಿಸಿದರೂ ಆ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ.
ಅನಿರೀಕ್ಷಿತವಾಗಿ ಈ ಹಿಂದೆನ ಭೂಸ್ವಾಧೀನ ತಿದ್ದುಪಡಿ ಮಾಡಿ ಹೆಚ್ಚುವರಿ ಭೂಮಿಯನ್ನು ಸರ್ಕಾರಕ್ಕೆ ವಾಪಾಸ್ ಪಡೆಯುವ ನಿರ್ಧಾರ ಕೈಗೊಂಡು ರಾಜ್ಯದ ಲಕ್ಷಾಂತರ ರೈತರಿಗೆ ಅನ್ಯಾಯ ವೆಸಗಿದರು. ಒಟ್ಟಿನಲ್ಲಿ ಕಳೆದ ಒಂದು ವರ್ಷದ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ಹಂತ ಹಂತವಾಗಿ ರೈತರನ್ನು ನಿಯಂತ್ರಿಸುವ ಕಾರ್ಯವನ್ನು ಮಾಡುತ್ತಿದ್ದು, ಇದನ್ನು ವಿರೋಧಿಸಿ ರೈತರು ಇಂದು ಸಾಂಕೇತಿಕ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ಧಾರೆ. ರೈತರಿಗೆ ನ್ಯಾಯಸಿಗುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಪ್ರತಿಭಟನಾ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ರೈತ ಸಮುದಾಯದ ಒಟ್ಟಾರೆ ಬೇಡಿಕೆಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೇ ವರದಿ ನೀಡಲಿದ್ದಾರೆ. ಆದರೆ, ಸಾರ್ವಜನಿಕರಿಗೆ ರಸ್ತೆ ತಡೆ ಚಳವಳಿ ನಡೆಸುವ ಮೂಲಕ ತೊಂದರೆಯಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸೂಚನೆ ನೀಡಿದರು.
ರೈತರು ತಮ್ಮ ಚಳುವಳಿಯನ್ನು ನಿಲ್ಲಿಸದೆ ಮುಂದುವರೆಸಿ ಸರ್ಕಾರದ ವಿರುದ್ದ ದಿಕ್ಕಾರ ಕೂಗಿದರು. ಮುಷ್ಕರ ನಿರತ ಎಲ್ಲಾ ರೈತರನ್ನು ಮನವಲಿಸಿದರಾದರೂ ಯಾವುದೇ ಪ್ರಯೋಜನವಾಗದ ಕಾರಣ ಸುಮಾರು 200ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು ಸಾಣಿಕೆರೆ ಉಪ ಪೊಲೀಸ್ ಠಾಣೆಗೆ ಕರೆದ್ಯೊಯದರು. ಮುಷ್ಕರ ಮುಗಿದ ನಂತರ ಎಲ್ಲಾ ರೈತರನ್ನು ಬಿಡುಗಡೆಗೊಳಿಸಲಾಯಿತು.
ರೈತರ ರಾಷ್ಟ್ರೀಯ ಹೆದ್ದಾರಿ ಮುಷ್ಕರ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸರು ಬಾರಿ ಬಂದೋಬಸ್ತ್ನ್ನು ಹಮ್ಮಿಕೊಂಡಿದ್ದರು. ಚಳವಳಿ ಹಿನ್ನೆಲೆಯಲ್ಲಿ ಸೋಮವಾರ ಬೆಳಗಿನಿಂದಲೇ ಪೊಲೀಸ್ ವಾಹನಗಳು ಗಸ್ತು ತಿರುಗಿ ಸಾರ್ವಜನಿಕ ಶಾಂತಿಗೆ ಬಂಗವಾದಂತೆ ಎಚ್ಚರಿಕೆ ವಹಿಸಿದ್ದರು.
ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮಾರ್ಗದರ್ಶನದಲ್ಲಿ ಒಂದು ಕೆಎಸ್ಆರ್ಪಿ ತುಕಡಿ, ಎರಡು ಡಿಎಆರ್ ವ್ಯಾನ್ ಹಾಗೂ ವೃತ್ತ ವ್ಯಾಪ್ತಿಯ ಎಲ್ಲಾ ಪಿಎಸ್ಐ ಮತ್ತು ಸಿಬ್ಬಂದಿವರ್ಗ ಬಂದೋಬಸ್ತ್ ಕಾರ್ಯವನ್ನು ಯಶಸ್ಸಿಯಾಗಿ ನಿರ್ವಹಿಸಿದರು. ತಾಲ್ಲೂಕು ಅಧ್ಯಕ್ಷ ಕೆ.ಸಿ.ಶ್ರೀಕಂಠ ಮೂರ್ತಿ , ಗೌರವಾಧ್ಯಕ್ಷ ತಿಮ್ಮಣ್ಣ, ಪ್ರಧಾನ ಕಾರ್ಯದರ್ಶಿ ಬಸವರಾಜು, ಕಾರ್ಯದರ್ಶಿ ನಾಗರಾಜಪ್ಪ, ಜಿ.ಎಸ್.ಯರ್ರಿಸ್ವಾಮಿ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದರು.