ಕೊಲ್ಹಾಪುರ
ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಾಳೆ ಎಲೆಕ್ಟ್ರಾನಿಕ್ ಮತ ಯಂತ್ರಗಳ(ಇವಿಎಂ) ನಿಖರತೆ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳಕೆಯಾದ ಇವಿಎಂ ಕುರಿತು ಆರೋಪದಲ್ಲಿ ಹುರುಳಿಲ್ಲ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾವು ಸೋತಿರುವ ಅಮೇತಿಯಲ್ಲಿನ ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಯನಾಡಿನಲ್ಲಿನ ಈ ಕುರಿತು ಅವರಲ್ಲಿ ಯಾಕೆ ಪ್ರಶ್ನೆ ಮೂಡುತ್ತಿಲ್ಲ ಎಂದು ಅಠವಾಳೆ ವ್ಯಂಗವಾಡಿದ್ದಾರೆ.
ಎನ್‌ಸಿಪಿ ಮುಖಂಡ ಶರದ್ ಪವಾರ್ ದೇಶದ ಅತ್ಯಂತ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿದ್ದು, ಅವರು ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದರು.
ಇವಿಎಂ ದುರ್ಬಳಕೆಯಾಗಿದ್ದರೆ ಎನ್‌ಸಿಪಿ ಮುಖಂಡರ ಪುತ್ರಿ ಸುಪ್ರಿಯಾ ಸುಲೆ ಹೇಗೆ ಭಾರಾಮತಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಚುನಾವಣಾ ಆಯೋಗ 2024ರ ಚುನಾವಣೆಯನ್ನು ಕಾಗದ ಮತಪತ್ರಗಳ ಮೂಲಕ ನಡೆಸಲು ನಿರ್ಧರಿಸಿದರೆ, ತಮ್ಮ ಪಕ್ಷ ಅದನ್ನು ಸ್ವೀಕರಿಸಲು ಸಿದ್ಧವಿದೆ ಎಂದರು.
ನರೇಂದ್ರ ಮೋದಿ ದೇಶವನ್ನು ವಿಭಜಿಸುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಉತ್ತರಿಸಿದ ಅವರು, ಕಳೆದ 5 ವರ್ಷಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಂದಾಗಿ ಮೋದಿ ಮರುಆಯ್ಕೆಗೊಂಡಿದ್ದಾರೆ ಎಂದರು.
ಶೇ.50ರಷ್ಟು ಮುಸ್ಲಿಂ ಮತ್ತು ಶೇ.70ರಷ್ಟು ದಲಿತರು ಮೋದಿ ಜೊತೆಗಿದ್ದಾರೆ ಎಂದರು. ಪ್ರಕಾಶ್ ಅಂಬೆಡ್ಕರ್ ನೇತೃತ್ವದ ವಂಚಿತ್ ಬಹುಜನ್ ಅಗ್ಹಾದಿ(ವಿಬಿಎ) ಮತ್ತು ಎನ್‌ಸಿಪಿಗಳು ಎನ್‌ಡಿಎ ಮೈತ್ರಿಕೂಟ ಸೇರಲಿ. ಕಾಂಗ್ರೆಸ್ ಮತ್ತು ಎನ್‌ಸಿಪಿಗೆ ಯಾವುದೇ ಭವಿಷ್ಯವಿಲ್ಲ ಎಂದರು.
ರಾಮಮಂದಿರ ಸಮಸ್ಯೆ ಕುರಿತು ಪ್ರತಿಕ್ರಿಯಿಸಿ, ವಿಷಯ ನ್ಯಾಯಾಲಯದಲ್ಲಿದೆ. ಮುಸ್ಲಿಂ ಸಮುದಾಯದವರು ಈ ಬಗ್ಗೆ ಚಿಂತೆಗೊಳ್ಳಬೇಕಿಲ್ಲ. ಸರ್ಕಾರ ಅಯೋಧ್ಯೆಯಲ್ಲಿ ಬುದ್ಧ ಮಂದಿರಕ್ಕು 10-15 ಎಕರೆ ಜಮೀನು ಮಂಜೂರು ಮಾಡಲಿದ ಎಂದರು.ಆರ್‌ಪಿಐ ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟದ ಜೊತೆ ಕೈಗೂಡಿಸಲಿದ್ದು, 20 ಕ್ಷೇತ್ರಗಳಿಗೆ ಬೇಡಿಕೆ ಇಡುವುದಾಗಿ ತಿಳಿಸಿದರು.