ಮಿಡಿಗೇಶಿ
ನೇರಳೇಕೆರೆ ಗ್ರಾಪಂ ಆವರಣದಲ್ಲಿ ಜೂನ್ 23ರಂದು ಇದೇ ಊರಿನ ಮಾನಸಿಕ ರೋಗಿ ವಿಜಯಲಕ್ಷ್ಮಮ್ಮ (70) ಎಂಬ ವಯೋವೃದ್ದೆ ಪ್ರಜ್ಞೆ ಇಲ್ಲದಂತೆ ಅನಾಥವಾಗಿ ಮಲಗಿರುತ್ತಾರೆ.
ಈಕೆಯ ಪತಿ ಲೇಟ್ ಜಗನ್ನಾಥ ಶೆಟ್ಟರು ನೇರಳೇಕೆರೆ ಗ್ರಾಮದಲ್ಲಿ ಹತ್ತಾರು ಎಕರೆ ಭೂಮಿ ಮತ್ತು ವಾಸಕ್ಕೊಂದು ಮನೆಯನ್ನು ಸಂಪಾದಿಸಿದ್ದರು. ಈ ದಂಪತಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿರುತ್ತಾರೆ. ಗಂಡು ಮಕ್ಕಳಲ್ಲಿ ಒಬ್ಬಾತ ನೇರಳೇಕೆರೆಯಲ್ಲಿಯೆ ವಾಸವಿದ್ದರೆ, ಮತ್ತೊಬ್ಬಾತ ಹೊಸಕೆರೆ ಗ್ರಾಮದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುತ್ತಾರೆ.
ಗ್ರಾಮದವರು ಹೇಳುವ ಪ್ರಕಾರ ಕೋಟ್ಯಂತರ ರೂಪಾಯಿ ಆಸ್ತಿ ಹಾಗೂ ವಿಜಯಲಕ್ಷ್ಮೀರವರು ಕೂಡಿಟ್ಟಿದ್ದ ಬಂಗಾರ ಮತ್ತು ಬೆಳ್ಳಿ ಆಭರಣಗಳ ಹಂಚಿಕೆ ವಿಷಯದಲ್ಲಿ ಗಂಡು ಮಕ್ಕಳಲ್ಲಿ ಮನಸ್ತಾಪ ಬಂದು, ಅದನ್ನು ಹಂಚಿಕೊಂಡು, ಪರಸ್ಪರ ಹೊಂದಾಣಿಕೆಯಿಲ್ಲದ ಕಾರಣ ತಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲಹಿದ ತಾಯಿಯನ್ನು ನೋಡಿಕೊಳ್ಳದೆ, ಈಕೆಯು ಕಳೆದ ಆರೇಳು ತಿಂಗಳುಗಳಿಂದಲೂ ಹೀಗೆ ಮಾನಸಿಕ ರೋಗಿಯಾಗಿ ಅಲೆಯುತ್ತಿದ್ದಾರೆ. ಈ ಬಗ್ಗೆ ಪ್ರಜಾಪ್ರಗತಿಗೆ ಸಾರ್ವಜನಿಕರು ನಿವೇದಿಸಿಕೊಂಡಿದ್ದಾರೆ.
ಹೆತ್ತ ತಂದೆ-ತಾಯಿಗಳನ್ನು ಹೆಣ್ಣಾಗಲಿ, ಗಂಡು ಮ್ಕಕಳಾಗಲಿ ಸಾಕಿ ಸಲಹಲೇಬೇಕೆಂಬುದಾಗಿ ಸುಪ್ರೀಂ ಕೋರ್ಟ್ ಹಲವು ಬಾರಿ ತನ್ನ ತೀರ್ಪೀನಲ್ಲಿ ಸುಸ್ಪಷ್ಟವಾಗಿ ಹೇಳಿದೆ. ಆದರೂ ಸಹ ಮನುಷ್ಯರಾದ ನಾವುಗಳು ತಮ್ಮನ್ನು ಹೆತ್ತ ತಾಯಿ ತಂದೆಯವರನ್ನು ಸಾಕಿ ಸಲಹುವುದಿಲ್ಲವೆಂದರೆ ಹೇಗೆ? ಸಂಬಂಧಿಸಿದ ಮಾನವ ಹಕ್ಕು ಆಯೋಗಕ್ಕೂ ಸಹ ಈ ಬಗ್ಗೆ ಜೂ.23 ರಂದು ನೇರಳೆಕೆರೆ ಗ್ರಾಮಸ್ಥರು ದೂರವಾಣಿ ಮೂಲಕ ತಿಳಿಸಿರುತ್ತಾರೆ. ಮುಂದೆ ಮಾನವ ಹಕ್ಕು ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದುರ ಬಗ್ಗೆ ಕಾಯ್ದು ನೋಡಬೇಕಾಗಿದೆ. ಅದಕ್ಕೂ ಮುನ್ನ ಗ್ರಾಮ ವ್ಯಾಪ್ತಿಗೆ ಬರುವಂತಹ ಬಡವನಹಳ್ಳಿ ಹಾಗೂ ಮಿಡಿಗೇಶಿ ಪೋಲೀಸ್ ಠಾಣಾಧಿಕಾರಿಳು ಎಚ್ಚೆತ್ತುಕೊಂಡು ತುರ್ತಾಗಿ ವಿಜಯಲಕ್ಷ್ಮಮ್ಮನ ಗಂಡು ಮಕ್ಕಳನ್ನು ಠಾಣೆಗೆ ಕರೆಸಿ, ಹೆತ್ತ ತಾಯಿಗೆ ಅನ್ನ, ನೀರು, ಬಟ್ಟೆ , ಇತರೆ ಸೌಲಭ್ಯ ಒದಗಿಸುವಂತಹ ಕೆಲಸ ಮಾಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








