ಮಾದಕ ವ್ಯಸನಿಗಳಲ್ಲಿ ಹದಿ ಹರೆಯದವರೇ ಹೆಚ್ಚು : ನ್ಯಾ ರಾಜೇಂದ್ರ ಬಾದಾಮಿಕರ

ತುಮಕೂರು

    ಮಾದಕ ದ್ಯವಗಳನ್ನು ಸೇವಿಸಿ ವ್ಯಸನಿಗಳಾಗುತ್ತಿರುವವರಲ್ಲಿ ಹದಿ ಹರೆಯದವರೇ ಹೆಚ್ಚಾಗಿರುವುದು ಆತಂಕಕಾರಿ ವಿಷಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

   ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಚರ್ಡ್ ಮದ್ಯವರ್ಜನ ಹಾಗೂ ಸಮಗ್ರ ಪುನರ್ವಸತಿ ಕೇಂದ್ರಗಳ ಸಹಯೋಗದಲ್ಲಿ ನಗರದ ಅಚರ್ಡ್ ಕೇಂದ್ರದಲ್ಲಿಂದು ಮಾದಕ ವಸ್ತುಗಳ ದುರ್ಬಳಕೆ ಹಾಗೂ ಅಕ್ರಮ ಸಾಗಾಟದ ವಿರುದ್ಧ ಆಯೋಜಿಸಿದ್ದ ಅಂತಾರಾಷ್ಟ್ರೀಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ವಸ್ತುಗಳ ದುರ್ಬಳಕೆ ಹಾಗೂ ಕಳ್ಳಸಾಗಾಣಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.

    ಮಾದಕ ವಸ್ತುಗಳ ದುರ್ಬಳಕೆ ಹಾಗೂ ಕಳ್ಳಸಾಗಾಣಿಕೆ ವಿರುದ್ಧ ಕಟ್ಟುನಿಟ್ಟಿನ ಕಾಯ್ದೆಗಳಿದ್ದರೂ ಹೊಲಗಳಲ್ಲಿ ಗಾಂಜಾ ಬೆಳೆಯುವುದು ನಿಂತಿಲ್ಲ. ಗಾಂಜಾ ಬೆಳೆಗೆ ಸಂಬಂಧಿಸಿದಂತೆ ಕಳೆದ 6 ತಿಂಗಳಲ್ಲಿ ಹೆಚ್ಚಿನ ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಿವೆ ಎಂದು ಕಳವಳ ವ್ಯಕ್ತಪಡಿಸಿದರು.

     ಹದಿ ಹರೆಯದ ಮಕ್ಕಳು ಮಾದಕ ದ್ರವ್ಯ ಸೇವನೆಗೆ ಬಲಿಯಾದರೆ, ಅವರ ಆರೋಗ್ಯ ಹಾಳಾಗುವುದಲ್ಲದೆ ಕುಟುಂಬವರ್ಗದವರು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಮಾದಕ ವ್ಯಸನಿಗಳಾದವರನ್ನು ವ್ಯಸನಮುಕ್ತರನ್ನಾಗಿಸುವುದು ಬಹಳ ಕಷ್ಟ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ಇಟ್ಟಿರಬೇಕು. ಪೋಷಕರ ಪ್ರೀತಿಯಿಂದ ವಂಚಿತರಾದವರು, ಮಾನಸಿಕ ಒತ್ತೊಡಕ್ಕೊಳಗಾದವರು ಕ್ಷಣಿಕ ಸುಖಕ್ಕಾಗಿ ಭವ್ಯ ಭಾರತವನ್ನು ಕಟ್ಟುವಂತಹ ಯುವ ಜನಾಂಗವೇ ಮಾದಕ ವ್ಯಸನಿಗಳಾಗುತ್ತಿದ್ದಾರೆ. ವ್ಯಸನರಾದ ಮಕ್ಕಳನ್ನು ಹೆದರಿಸಿ ಬೆದರಿಸಿ ಸರಿದಾರಿಗೆ ತರಲಾಗುವುದಿಲ್ಲ.

     ಪ್ರೀತಿವಿಶ್ವಾಸದಿಂದ ಅವರ ಮನವೊಲಿಸಿ ತಿಳಿಹೇಳಬೇಕು. ಮಾದಕ ವಸ್ತುಗಳ ಮಾರಾಟದ ಬಗ್ಗೆ ಸುಳಿವು ಸಿಕ್ಕಿದವರು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದರಲ್ಲದೆ ದಿನಾಚರಣೆಯಿಂದ ಜವಾಬ್ದಾರಿ ಮುಗಿಯುವುದಿಲ್ಲ. ಮಾದಕ ಮುಕ್ತ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಮಾತನಾಡಿ ವಿಶ್ವ ಸಂಸ್ಥೆಯು 1987ರಿಂದ ಈ ದಿನಾಚರಣೆಯನ್ನು ಆಚರಿಸಲು ಘೋಷಿಸಿದ್ದು, ಈ ವರ್ಷ ಆರೋಗ್ಯಕ್ಕಾಗಿ ನ್ಯಾಯ-ನ್ಯಾಯಕ್ಕಾಗಿ ಆರೋಗ್ಯ ಎಂಬ ಘೋಷಾವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಾದಕ ವಸ್ತುಗಳ ದುರ್ಬಳಕೆ ಹಾಗೂ ಅಕ್ರಮ ಸಾಗಾಟದ ವಿರುದ್ಧ ದನಿ ಎತ್ತುವುದು ಯಾವುದೇ ಒಂದು ಇಲಾಖೆ ಜವಾಬ್ದಾರಿಯಲ್ಲ. ಸಾರ್ವಜನಿಕರು, ಅಧಿಕಾರಿಗಳು, ಪೋಷಕರು ಕೈಜೋಡಿಸಬೇಕು. ನಗರದ ಪ್ರತಿ ಪೊಲೀಸ್ ಠಾಣೆಯಿಂದ ದಿನಾಚರಣೆಯನ್ನು ಆಚರಿಸಲು ಸೂಚಿಸಲಾಗಿದ್ದು, ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾದಕ ವಸ್ತುಗಳ ಅಕ್ರಮ ಸಾಗಾಟದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರಲ್ಲದೆ ಮಾದಕ ವಸ್ತುಗಳ ಸೇವನೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ಹೊಡೆದೋಡಿಸಲು ಯುವ ಜನಾಂಗ ಮುಂದಾಗಬೇಕು ಎಂದು ತಿಳಿಸಿದರು.

       ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರೇಮ್‍ಕುಮಾರ್ ಮಾತನಾಡಿ, 15ರಿಂದ 20ವರ್ಷ ವಯೋಮಾನದವರು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಓದಬೇಕಾದ ವಯಸ್ಸಿನಲ್ಲಿ ಕುತೂಹಲಕ್ಕಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅಲ್ಲದೆ ಮಾನಸಿಕ ಒತ್ತಡಕ್ಕೊಳ ಗಾದವರು ಧ್ಯಾನ, ಹಿರಿಯರ ಮಾರ್ಗದರ್ಶನ ಮತ್ತಿತರ ಮಾರ್ಗಗಳನ್ನು ಅನುಸರಿಸದೆ ಮದ್ಯ ಸೇವನೆಗಾಗಿ ಬಾರ್‍ಗಳಿಗೆ ಹೋಗುವ ಸನ್ನಿವೇಶಗಳು ಹೆಚ್ಚಾಗಿವೆ. ಸಿನಿಮಾ, ಸಾಮಾಜಿಕ ಜಾಲತಾಣಗಳಲ್ಲಿರುವ ಋಣಾತ್ಮಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಧನಾತ್ಮಕ ಅಂಶಗಳನ್ನು ಮಾತ್ರ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ಜಿಲ್ಲಾ ಕುಷ್ಠರೋಗ ನಿಯಂತ್ರಣ ಮತ್ತು ಮಾನಸಿಕ ರೋಗ ನಿವಾರಣಾಧಿಕಾರಿ ಡಾ: ಚೇತನ್ ಮಾತನಾಡಿ, ಮಾದಕ ವಸ್ತುಗಳ ಅಕ್ರಮ ಮಾರಾಟದ ಜಾಲ ನಗರದಲ್ಲಿ ಮಾತ್ರ ಹರಡಿದ್ದು, ವ್ಯಸನಿಗಳ ಸಂಖ್ಯೆ ಹೆಚ್ಚಾದಂತೆ ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲಿಯೂ ತನ್ನ ಜಾಲವನ್ನು ಹರಡುವ ಸಾಧ್ಯತೆ ಇದೆ. ಸಮೀಕ್ಷೆಯ ಪ್ರಕಾರ ಶೇ. 16ರಷ್ಟು ಭಂಗ್, ಆಲ್ಕೋಹಾಲ್, ತಂಬಾಕು ವ್ಯಸನಿಗಳಿದ್ದು, ಶೇ.25ರಷ್ಟು ಜನ ಒಂದಲ್ಲಾ ಒಂದು ವ್ಯಸನದಿಂದ ಬಳಲುತ್ತಿದ್ದಾರೆ.

       ಈ ಸಮೀಕ್ಷೆಯಲ್ಲಿ ಮದ್ಯ ವ್ಯಸನಿಗಳ ಮಾಹಿತಿ ಮಾತ್ರ ನಿಖರವಾಗಿ ಹೇಳಬಹುದಾಗಿದ್ದು, ಗಾಂಜಾ, ಚರಸ್, ಹೆರಾಯಿನ್, ಓಪಿಎಂ ಮತ್ತಿತರ ಮಾದಕ ದ್ರವ್ಯಗಳ ಮಾಹಿತಿ ನಿಖರವಾಗಿ ತಿಳಿಯುವುದಿಲ್ಲ ಎಂದು ಮಾಹಿತಿ ನೀಡಿದರಲ್ಲದೆ, ಪ್ರತಿ 17 ಪುರುಷನಿಗೆ ಒಬ್ಬ ಮಹಿಳೆ ಮಾದಕ ವ್ಯಸನಕ್ಕೊಳಗಾಗುತ್ತಿರುವುದು ಆತಂಕಕಾರಿ ಸಂಗತಿ. ಮಾದಕ ವಸ್ತುಗಳ ದುರ್ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು. ಕಾನೂನಿನಿಂದಷ್ಟೇ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಸಮಾಲೋಚನೆಯಿಂದ ಅರಿವು ಮೂಡಿಸುವುದರಿಂದಲೂ ಮಾದಕ ದ್ರವ್ಯಗಳ ನಿಯಂತ್ರಣ ಸಾಧಿಸಬಹುದು ಎಂದು ತಿಳಿಸಿದರು.

       ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ: ಶರತ್ ವಿಶ್ವರಾಜ್ ಮಾತನಾಡಿ, ಡಿ-ಅಡಿಕ್ಷನ್ ಕೇಂದ್ರಗಳಲ್ಲಿ ಮಾದಕ ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಬಹುದು. ಕುತೂಹಲಕ್ಕೆ ಆರಂಭವಾಗುವ ಮಾದಕ ಸೇವನೆ ಹಂತಹಂತವಾಗಿ ಚಟವಾಗಿ ಬೆಳೆಯುತ್ತದೆ. ಈ ಚಟವನ್ನು ಬಿಟ್ಟಾಗ ದೇಹದಲ್ಲಿ ವಿಚಿತ್ರ ಅನುಭವ, ನಿದ್ರಾಹೀನತೆ, ಜಾಂಡೀಸ್, ನಡುಕ, ಭ್ರಮೆಗೊಳಗಾಗುತ್ತಾರೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಅರಿತು ಅದರಿಂದ ದೂರವಿರುವುದೇ ಲೇಸು. ಉತ್ತಮ ಅಭಿರುಚಿಗಳನ್ನು ಬೆಳೆಸಿಕೊಂಡು ನಡೆದಲ್ಲಿ ಆರೋಗ್ಯಕರ ಹಾಗೂ ನೆಮ್ಮದಿಯುತ ಜೀವನ ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

       ಅಚರ್ಡ್ ಮದ್ಯವರ್ಜನ ಮತ್ತು ಪುನರ್ವಸತಿ ಕೇಂದ್ರದಲ್ಲಿ ವ್ಯಸನ ಮುಕ್ತರಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷೆ ಜಿ.ಕೆ.ಅನಿಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು, ಜಿಲ್ಲಾ ಹಿರಿಯ ನಾಗರೀಕರ ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ರಮೇಶ್, ಅಚರ್ಡ್ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಡಾ: ಹೆಚ್.ಜಿ.ಸದಾಶಿವಯ್ಯ, ಕಾರ್ಯದರ್ಶಿ ಮಾಲಾ ಸದಾಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap