ಆಧುನಿಕ ದಿನದಲ್ಲಿ ಹೆಚ್ಚು ಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ :ರವಿಕುಮಾರ್

ಹರಿಹರ:

     ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದುಶ್ಚಟಗಳಿಗೆ ದಾಸರಾಗಿದ್ದು ಅದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇವರಿಗೆ ಉತ್ತಮ ಮಾಹಿತಿ ನೀಡುವುದರಿಂದ ಉಜ್ವಲ ಜೀವನ ನಡೆಸುವ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಗ್ರಾಮಾಂತರ ಠಾಣೆಯ ಪಿಎಸ್‍ಐ ರವಿಕುಮಾರ್ ಸಲಹೆ ನೀಡಿದರು.

     ತಾಲೂಕಿನ ಬನ್ನಿಕೋಡು ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮತ್ತು ಹರಿಹರ ಗ್ರಾಮಾಂತರ ಠಾಣೆಯ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾದಕ ಸೇವನೆಯಿಂದ ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ಪ್ರತೀ ವರ್ಷ 10 ಲಕ್ಷ ಜನರು ಮರಣ ಹೊಂದುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

     ಮಾದಕ ವಸ್ತು ಎಂದರೆ ನಶೆ ಒಳಗಾಗುವ ಪದಾರ್ಥಗಳು. ಇತ್ತೀಚಿನ ದಿನಗಳಲ್ಲಿ ಕುಡಿತವೊಂದೇ ಅಲ್ಲದೇ ಡ್ರಕ್ಸ್, ಅಫೀಮ್, ಗಾಂಜ, ಸಿಗರೇಟು ಹಾಗೂ ಮಹಿಳೆಯರು ಬಳಕೆ ಮಾಡುವಂತಹ ನೇಲ್ ಫಾಲೀಶ್, ವೈಟ್ನರ್ ಇಂತಹ ವಸ್ತುಗಳನ್ನು ಕೂಡ ಬಳಕೆ ಮಾಡಿಕೊಂಡು ಮಾದಕ ವಸ್ತುಗಳಿಗೆ ಅಧೀನರಾಗುತ್ತಿದ್ದಾರೆ. ರಾಜ್ಯದಲ್ಲಿ ಸಾವಿರಾರು ಜನರು ಒಂದು ವರ್ಷದಲ್ಲಿ ಸಾವಿಗೀಡಾಗುತ್ತಿದ್ದು, ಇದರಲ್ಲಿ ಯುವ ಸಮುದಾಯವೇ ಹೆಚ್ಚು ಬಾಗಿಯಾಗಿರುವುದು ಆತಂಕಕಾರಿ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.

       ಬನ್ನಿಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪ್ರಶಾಂತ್ ಮಾತನಾಡಿ, ಪ್ರಸ್ತುತ ದಿನದಲ್ಲಿ ಕುಡಿತವಿಲ್ಲದೇ ಇರುವ ಕುಟುಂಬಗಳನ್ನು ಹುಡುಕಬೇಕಾಗಿದೆ. ಆದುದ್ದರಿಂದ ನಾವೆಲ್ಲ ಜಾಗೃತರಾಗಿ ಮುಂದಿನ ಪೀಳಿಗೆಯವರು ಈ ವಸ್ತುಗಳಿಂದ ದೂರವಿರುವಂತೆ ಎಚ್ಚರ ವಹಿಸಿ ಜೀವನವನ್ನು ನಡೆಸಬೇಕು. ಮಾದಕ ಸೇವನೆಯಿಂದ ಯುವ ಪೀಳೆಗೆ ದೂರವಿರುವುದು ಬಹು ಮುಖ್ಯ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಪ್ರಯೋಜನವಾಗಲಿ ಎಂದು ಸಲಹೆ ನೀಡಿದರು.

      ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸಲು ವಿದ್ಯಾರ್ಥಿಗಳಿಗೆ ಮಾಹಿತಿಯ ಮೂಲಕ ಜಾಗ್ರತೆಗೊಳಿಸಿ. ಮುಂದಿನ ಜೀವನವನ್ನು ಯಾವುದೇ ರೀತಿ ಮಾದಕವಸ್ತುಗಳು ಬಳಕೆಯಾಗದಂತೆ ನೋಡಿಕೊಳ್ಳುವಂತೆ ಮಾಹಿತಿ ಮಾರ್ಗದರ್ಶನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

      ಈ ವೇಳೆ ಸಿಬ್ಬಂದಿಗಳಾದ ಎಎಸ್‍ಐ ಮಹಮದ್ ಇಸಾಕ್, ಕರಿಯಣ್ಣ, ಪ್ರಕಾಶ್, ಭಾನುಪ್ರಕಾಶ್, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link