ಪತ್ರಕರ್ತರಲ್ಲಿ ಒಗ್ಗಟ್ಟಿರಲಿ ; ಆಲೋಚನೆಯಲ್ಲಿ ಅಲ್ಲ-ಡಿಸಿ ಸಲಹೆ

 ಬಳ್ಳಾರಿ:

      ಪತ್ರಕರ್ತ ಮಿತ್ರರಲ್ಲಿ ಸದಾ ಒಗ್ಗಟ್ಟಿರಲಿ ಆದರೇ ಅಲೋಚನೆಯಲ್ಲಿ ಅಲ್ಲ ಎಂದು ಒತ್ತಿ ಹೇಳಿದ ಬಳ್ಳಾರಿ ನೂತನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾಧ್ಯಮವು ಸಮಾಜದ ಒರೆ-ಕೊರೆಗಳನ್ನು ತಿದ್ದುವ ಮೂಲಕ ಕೈಗನ್ನಡಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

      ಪತ್ರಿಕಾ ದಿನಾಚರಣೆ ನಿಮಿತ್ತ ಬಳ್ಳಾರಿ ಪತ್ರಿಕಾ ಬಳಗದಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

      ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗದ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮವು ಕೂಡ 4ನೇ ಅಂಗವಾಗಿದೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ತಳವರ್ಗಗಳ ಮತ್ತು ಶೋಷಿತ ವರ್ಗಗಳ ಪರ ಧ್ವನಿ ಎತ್ತುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಬಳ್ಳಾರಿ ಜಿಲ್ಲೆಯಲ್ಲಿ ಬಹಳಷ್ಟು ಉತ್ತಮ ಬರಹಗಾರರಿದ್ದು; ಬಹುತೇಕರಲ್ಲಿ ಹೋರಾಟದ ಬರವಣಿಗೆಯನ್ನು ಕಂಡಿರುವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

      ಪತ್ರಕರ್ತರಾದವರು ಯಾವ ಕಡೆಯೂ ವಾಲದೇ ತಟಸ್ಥವಾಗಿದ್ದುಕೊಂಡು ವರದಿಗಳು ಮಾಡಿದಾಗ ಮಾತ್ರ ನ್ಯಾಯ ದೊರಕಿಸಿಕೊಡಲು ಸಾಧ್ಯ. ವರದಿ ಮಾಡುವಾಗ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ವರದಿ ಮಾಡಿದರೇ ಮುಂದಾಗುವ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

      ಅಂಧಶ್ರದ್ಧೆಗಳ ಆಚರಣೆಗಳನ್ನು ಹೊಗಲಾಡಿಸಲು ಮಾಧ್ಯಮಗಳು ಒಂದು ಗುಂಪಾಗಿ ಕೆಲಸ ಮಾಡಬೇಕು. ಒಂದು ವರದಿ ಪ್ರಕಟಗೊಂಡಾಗ ಅದರಿಂದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತದೆ. ಏಕ ಪಕ್ಷೀಯವಾಗಿ ವರದಿಗಳು ಇರದಂತಿರಬೇಕು ಎಂದರು.

      ಕನ್ನಡದ ಮೊದಲ ಶಬ್ದಕೋಶ ಮತ್ತು ಕನ್ನಡ ಮೊದಲ ಪತ್ರಿಕೆ ಆರಂಭಿಸಿದ್ದು ಜರ್ಮನ್ ಪ್ರಜೆಗಳಿಂದ. ಅವರಿಗೆ ಕನ್ನಡ ಭಾಷೆ ಮೇಲಿದ್ದ ಪ್ರೇಮ ಅಪಾರ ಎಂದು ಹೇಳಿದ ಅವರು ಮಂಗಳೂರು ಸಮಾಚಾರ ಪತ್ರಿಕೆಯಲ್ಲಿ ಗಂಭೀರ ವಿಷಯಗಳ ವಿಶ್ಲೇಷಣೆಗಳಿರುತ್ತಿದ್ದವು ಎಂದು ವಿವರಿಸಿದರು. ಕನ್ನಡ ಪತ್ರಿಕೋದ್ಯಮಕ್ಕೆ ಬಳ್ಳಾರಿ ನೀಡಿರುವ ಕೊಡುಗೆ ಸ್ಮರಣೀಯವಾದುದು ಎಂದರು.

      ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್ ಅವರು ಮಾತನಾಡಿ, ವರದಿಗಳನ್ನು ಜನಓದುತ್ತಾರೆ. ಅದರಿಂದ ಜನಾಭಿಪ್ರಾಯ ಮೂಡಿಸುವ ಶಕ್ತಿ ಮಾಧ್ಯಮಕ್ಕಿದೆ ಅದಕ್ಕಾಗಿ ವರದಿಗಳು ಅಭಿವೃದ್ಧಿ ಮತ್ತು ಸಮಾಜದ ಒಳಿತಿಗೆ ಸಹಕಾರಿಯಾಗಿರಬೇಕು ಯಾವುದೇ ಒಂದು ವರದಿ ಪ್ರಕಟಿಸುವ ಮುನ್ನ ಅದರಿಂದ ಉಂಟಾಗುವ ಹಾನಿ ಬಗ್ಗೆ ಚಿಂತಿಸಿ ಪೂರ್ವಾಪರ ತಿಳಿದು ನೈಜತೆಯನ್ನು ಪ್ರಕಟಿಸಬೇಕು ಅಂತಹ ಮಾಧ್ಯಮ ಮಾತ್ರ ತನ್ನ ವಿಶ್ವಾಸವನ್ನು ಉಳಿಸಿಕೊಳ್ಳಬಹುದು ಎಂದರು.

      ಮಾಧ್ಯಮಗಳಿಗೆ ಬಂಡವಾಳ ಹೂಡಿಕೆ ಲಾಭಾಂಶ ಎಂಬುದಾಗುತ್ತಾ ಸಾಗಿರುವುದರಿಂದ ಇಂದು ಸುದ್ದಿಗಳ ಬಗ್ಗೆ ಈಗ ಚರ್ಚೆಗೆ ಗ್ರಾಸವಾಗುವಂತಾಗಿದೆ. ಅದಕ್ಕಾಗಿ ಪತ್ರಿಕಾ ಸ್ವಾತಂತ್ರ್ಯ ಕಡಿಮೆ ಆಗಬಾರದು;ಆ ಕೆಲಸ ಈಗ ಅಗತ್ಯ ಇದೆ ಎನಿಸುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಮಣ ನಿಂಬರಗಿ ಮಾತನಾಡಿ, ಸಂವಿಧಾನದಲ್ಲಿ ಮಾಧ್ಯಮಕ್ಕೆ ರಕ್ಷಣೆ ಇದೆ. ಬರವಣಿಗೆಯ ಸ್ವಾತಂತ್ರ್ಯ ಇದೆ. ಸಮಾಜ ಮತ್ತು ಸರಕಾರದ ಮಧ್ಯೆ ಕೊಂಡಿಯಾಗಿ ಮಾಡುವುದೇ ಮಾಧ್ಯಮ ಮತ್ತು ತನ್ನದೇ ನೈತಿಕತೆಯನ್ನು ಮಾಧ್ಯಮ ಹೊಂದಿರಬೇಕಿದೆ. ವರದಿಯನ್ನು ವಾಸ್ತವ ಅಂಶವನ್ನು ಬದಿಗಿಟ್ಡು ತನ್ನ ಮಾಧ್ಯಮ ಸಂಸ್ಥೆಯ ನಿಲುವಾಗಿ ಪರಿವರ್ತನೆ ಗೊಳ್ಳಬಾರದು. ಜನಕ್ಕೆ ಮಾಧ್ಯಮವೂ ಉತ್ತರಾಯದತ್ತವಾಗಿರಬೇಕು. ಗುಣಾತ್ಮಕ ವಿಮರ್ಶೆ ಇರಬೇಕು ಅದು ಬಿಟ್ಟು ಅದು ಋಣಾತ್ಮಕ ವಾಗಿರಬಾರದು, ಜೊತೆಗೆ ಕಾನ್ಪಿಡೆನ್ಸಿಯನ್ನು ಅಳವಡಿಸಿಕೊಳ್ಳಬೇಕು. ಮಾಧ್ಯಮಗಳ ವರದಿಗೂ ಇರುವ ಇತಿಮಿತಿಗಳ ಕಾನೂನು ಪ್ರತಿಯೊಬ್ಬ ವರದಿಗಾರ ಅರಿತಿರಬೇಕು ಎಂದರು.

      ಸಾಮಾಜಿಕ ಜಾಲತಾಣದಲ್ಲಿ ಬರುವ ಸಂಗತಿಗಳನ್ನು ಪರಾಮರ್ಶಿಸಿಸದೇ, ಸತ್ಯಾ ಸತ್ಯತೆ ತಿಳಿಯದೆ ಪ್ರಕಟಿಸಬೇಡಿ ಎಂದು ಮನವಿ ಮಾಡಿದ ಅವರು ಇಲ್ಲದಿದ್ದರೆ ಅನೇಕ ಅನಾಹುತಗಳು ಆಗುತ್ತವೆ;ಅದಕ್ಕಾಗಿ ಸಮಾಜದ ಸ್ವಾಸ್ಥ್ಯವನ್ನು ಮಾಧ್ಯಮ ಕಾಪಾಡಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಮಾಧ್ಯಮದ ಸ್ಥಿತಿಗತಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಬಿ.ಸಮೀವುಲ್ಲಾ ಅವರು ಹೊಸತಲೆಮಾರಿನ ಮಾಧ್ಯಮ ಪ್ರತಿನಿಧಿಗಳಲ್ಲಿ ಪರಂಪರೆ ಪ್ರಜ್ಞೆಯ ಕೊರತೆ ಎದ್ದುಕಾಣುತ್ತಿದ್ದು,ಇದರಿಂದ ವರದಿಗಳಲ್ಲಿ ನೈಜತೆ ಕುಸಿಯುವಂತೆ ಮಾಡಿದೆ ಎಂದರು.

      ಡಿಜಿಟಲ್ ಮಾದರಿಯ ಹೊಸ ಮಾಧ್ಯಮದವರಿಗೆ ಚಳವಳಿಯ, ಪರಂಪರೆ ಪ್ರಜ್ಞೆ ಇಲ್ಲದಾಗಿದೆ. ಅವರಿಂದಾಗಿ ವ್ಯಕ್ತಿಯ ಆಲೋಚನೆಯೇ ಪ್ರಾಮುಖ್ಯತೆ ಆಗುತ್ತಿರುವುದರಿಂದ ಸಾಮಾಜಿಕ ಜವಾಬ್ದಾರಿಯಿಂದ ದೂರ ಹೋದಂತೆ ಕಾಣುತ್ತಿದೆ. ಅದಕ್ಕಾಗಿ ಹೊಸ ತಲೆಮಾರು ಇದರ ಬಗ್ಗೆ ಯೋಚಿಸಬೇಕಿದೆ ಎಂದರು.

      ಮಾಧ್ಯಮಗಳು ಆಯ್ದ ಸಿದ್ಧಾಂತದ ಪ್ರಚಾರಕದಂತಾಗಿದ್ದು ವಿಶ್ವಾಸರ್ಹತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಇತ್ತೀಚಿನ ಉದಾರಣೆಗಳನ್ನು ಉಲ್ಲೇಖಿಸಿ ಅವರು ವಿವರಿಸಿದರು. ಗಾಂಧೀಜಿ ಚಿತ್ರಕ್ಕೆ ಅವಮಾನ ಮಾಡಿ ಘಟನೆ ಮತ್ತು ಗೋಡ್ಸೆ ಸಿದ್ಧಾಂತಗಳನ್ನು ಒಪ್ಪಿದ ಘಟನೆಗಳ ಬಗ್ಗೆ ಖಂಡಿಸಿದ ಧ್ವನಿ ಹೆಚ್ಚಾಗಿ ಮಾಧ್ಯಮಗಳಲ್ಲಿ ಬರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

      ಪತ್ರಿಕಾ ದಿನಾಚರಣೆಯ ಈ ಸಂದರ್ಭದಲ್ಲಿ ಆತ್ಮವಲೋಕನ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು,ಇದಕ್ಕೆ ಮಾಧ್ಯಮ ವ್ಯಾಪಾರೀಕರಣವಾಗಿರುವುದು ಎಂದು ಅವರು ಬೇಸರ ವ್ಯಕ್ತಪಡಿಸಿದರು.

      ಅಧ್ಯಕ್ಷತೆ ವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಮಾತನಾಡಿ, ಬಳ್ಳಾರಿ ಪತ್ರಿಕಾ ಭವನದಲ್ಲಿ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ಸ್ಥಿತಿಗತಿ, ಬದಲಾಗುತ್ತಿರುವ ಕಾನೂನು ಮತ್ತು ಮಾಧ್ಯಮದ ಬರವಣಿಗೆ, ಸೋಶಿಯಲ್ ಮಿಡಿಯಾ ಮತ್ತು ಮಾಧ್ಯಮ, ಗಾಳಿಸುದ್ದಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಕೆ.ಎಂ.ಮಂಜುನಾಥ್, ಸಂವಿಧಾನದ ಕಾವಲುಗಾರನಾಗಿ ಪತ್ರಿಕಾ ರಂಗ ಕೆಲಸ ಮಾಡುತ್ತಿದೆ. ಕನ್ನಡ ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆಯನ್ನು ತಿಳಿಸುತ್ತ ಮೊದಲಕನ್ನಡ ಪತ್ರಿಕೆ ಮಂಗಳೂರು ಸಮಾಚಾರ ಬಳ್ಳಾರಿಯಿಂದ ಪ್ರಕಟಗೊಳ್ಳುತ್ತಿರುವುದನ್ನು ಉಲ್ಲೇಖಿಸಿದರು.

      ಹಿರಿಯ ಪತ್ರಕರ್ತರಾದ ಎಸ್.ಕಿನ್ನೂರೇಶ್ವರ ಅವರು ಸ್ವಾಗತಿಸಿದರು. ಪತ್ರಕರ್ತ ಸುರೇಶ್ ಚವ್ಹಾಣ್ ನಿರೂಪಿಸಿದರು. ವಿಡಿಯೋ ಜರ್ನಲಿಸ್ಟ್ ಶ್ರೀನಿವಾಸ್ ಶೆಟ್ಟಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link