ತುಮಕೂರು
ತುಮಕೂರು ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಹಾಗೂ ಏಕೈಕ ಆಸರೆ ಆಗಿರುವ ಬುಗುಡನಹಳ್ಳಿಯ `ಹೇಮಾವತಿ ಜಲಸಂಗ್ರಹಾಗಾರ’ದಲ್ಲಿರುವ ನೀರಿನ ಪ್ರಮಾಣ ಅತ್ಯಂತ ಕ್ಷೀಣವಾಗಿದೆ. ಹೇಮಾವತಿ ನೀರಿನ ಲಭ್ಯತೆಯು ಈಗ ದಿನಗಣನೆಯ ಅಂತಿಮ ಹಂತ ತಲುಪಿದೆ. ಪರಿಣಾಮವಾಗಿ ನಗರದಲ್ಲಿ ಭಾಗಶಃ ನೀರಿನ ಸಮಸ್ಯೆ ತಲೆಯೆತ್ತಲಾರಂಭಿಸಿದೆ. ನೀರಿನ ಪರಿಸ್ಥಿತಿ ಆತಂಕಕಾರಿ ಎನಿಸುತ್ತಿರುವ ಈಗಿನ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ಮೈದಾಳ ಕೆರೆಯಲ್ಲಿರುವ ಅಲ್ಪಸ್ವಲ್ಪ ನೀರೇ ನಗರದ ಜನತೆಗೆ ಪರ್ಯಾಯ ಆಸರೆಯಾಗಿ ಕಾಣತೊಡಗಿದೆ.
ಪ್ರಸ್ತುತ ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಹೇಮಾವತಿ ನೀರು ಬಹುತೇಕ ಖಾಲಿ ಆಗಿದೆ. ಸೀಮಿತ ಪ್ರದೇಶದಲ್ಲಿ ಸುಮಾರು ಅರ್ಧ ಅಡಿಯಷ್ಟು ಮಾತ್ರ ನೀರು ಆವರಿಸಿದೆ. ತುಮಕೂರು ಮಹಾನಗರ ಪಾಲಿಕೆಯು ಹಿತಮಿತವಾಗಿ ಈ ನೀರನ್ನು ತುಮಕೂರು ನಗರಕ್ಕೆ ಸರಬರಾಜು ಮಾಡುತ್ತಿದೆ. ಇದೇ ಪ್ರಮಾಣದಲ್ಲಿ ನೀರನ್ನು ಬಳಸಿಕೊಂಡರೆ ಈ ಜುಲೈ ತಿಂಗಳ ಕೊನೆಯವರೆಗೂ ಅಷ್ಟಿಷ್ಟಾದರೂ ಹೇಮಾವತಿ ನೀರನ್ನು ಉಪಯೋಗಿಸಿಕೊಳ್ಳಬಹುದಾಗಿದ್ದು, ಜುಲೈ ಕೊನೆಯ ಹೊತ್ತಿಗೆ ಜಲಸಂಗ್ರಹಾಗಾರ ಸಂಪೂರ್ಣ ಬರಿದಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.
ಮಳೆಗಾಲ ಆರಂಭವಾದರೂ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯ ಇನ್ನೂ ಬರಿದಾಗಿಯೇ ಇದೆ. ಅಲ್ಲಿನ ಜಲಾನಯನ ಪ್ರದೇಶದಲ್ಲಿ ಮಳೆಯಾಗಿ, ಆ ನೀರು ಗೊರೂರು ಜಲಾಶಯಕ್ಕೆ ಹರಿದು ಬರಬೇಕು. ಜಲಾಶಯ ತುಂಬಬೇಕು. ಆ ಬಳಿಕವಷ್ಟೇ ನೀರಿನ ಹಂಚಿಕೆಯ ವಿಷಯ ಮುಂದಾಗುತ್ತದೆ. ತುಮಕೂರು ನಾಲೆಗೆ ಹೇಮಾವತಿ ನೀರನ್ನು ಹರಿಸಿದಾಗ, ಅದು ಅಡೆತಡೆಯಿಲ್ಲದಂತೆ ನೇರವಾಗಿ ತುಮಕೂರು ತಾಲ್ಲೂಕು `ಬುಗುಡನಹಳ್ಳಿ ಜಲಸಂಗ್ರಹಾಗಾರ’ಕ್ಕೆ ಹರಿದುಬಂದರೆ, ಜಲಸಂಗ್ರಹಾಗಾರ ಭರ್ತಿಯಾದರೆ, ಆಗ ತುಮಕೂರಿನ ಆತಂಕ ದೂರವಾಗಲಿದೆ ಎಂಬುದು ಕಠೋರ ವಾಸ್ತವ ಸಂಗತಿಯಾಗಿದೆ.
ಮೈದಾಳ ಕೆರೆ ಆಸರೆ
ಸದ್ಯದ ಪರಿಸ್ಥಿತಿಯಲ್ಲಿ ತುಮಕೂರು ತಾಲ್ಲೂಕು ಮೈದಾಳದಲ್ಲಿರುವ ಕೆರೆಯ ನೀರೇ ತುಮಕೂರು ನಗರದ ಮತ್ತೊಂದು ಆಸರೆಯಾಗಿ ಕಾಣುತ್ತಿದೆ. ಒಂದಾನೊಂದು ಕಾಲದಲ್ಲಿ ಇಡೀ ತುಮಕೂರು ನಗರಕ್ಕೆ ಮೈದಾಳ ಕೆರೆಯ ನೀರೇ ಏಕೈಕ ಆಸರೆಯಾಗಿತ್ತು. ಆದರೆ ಎರಡು ದಶಕಗಳ ಹಿಂದೆ ಹೇಮಾವತಿ ನೀರು ಬರತೊಡಗಿದ ಬಳಿಕ ಹೇಮಾವತಿ ನೀರೇ ಪ್ರಧಾನವಾಯಿತು. ಆದರೂ ಸಹ ಮೈದಾಳ ಕೆರೆ ನೀರಿನ ನಂಟು ಸೀಮಿತ ಪ್ರಮಾಣದಲ್ಲೇ ಮುಂದುವರೆದಿತ್ತು. ಮೈದಾಳ ಕೆರೆಯಿಂದ ತುಮಕೂರಿನ ವಿದ್ಯಾನಗರದ ವಾಟರ್ ವಕ್ರ್ಸ್‍ಗೆ ನೀರನ್ನು ಹರಿಸಿ, ಆ ನೀರನ್ನು ಶುದ್ಧೀಕರಿಸಿ ವಾರ್ಡ್‍ಗಳಿಗೆ ವಿತರಿಸುವ ಕೆಲಸ ನಡೆದೇ ಇತ್ತು. ಈಗ ಬುಗುಡನಹಳ್ಳಿ ನೀರು ಬರಿದಾಗಿರುವುದರಿಂದ ಮತ್ತೆ ಸಹಜವಾಗಿ ಮೈದಾಳ ಕೆರೆ ನೀರು ಎಲ್ಲರ ಗಮನ ಸೆಳೆಯುತ್ತಿದೆ.
ಪ್ರಸ್ತುತ ಮೈದಾಳ ಕೆರೆಯಲ್ಲಿ 118 ದಶಲಕ್ಷ ಘನ ಅಡಿಯಷ್ಟು ನೀರಿನ ಲಭ್ಯತೆ ಇದೆ. ಕೆರೆಯಲ್ಲಿ ಅನಿವಾರ್ಯವಾಗಿ ಉಳಿಸಲೇಬೇಕಾದ ನೀರಿನ ಪ್ರಮಾಣ (ಡೆಡ್ ಸ್ಟೋರೇಜ್) ಹಾಗೂ ಆ ಕೆರೆಯಿಂದ ರೂಪಿಸಿರುವ `ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಗಾಗಿ ಒಟ್ಟು 30 ಎಂ.ಸಿ.ಎïಟಿ.ಯಷ್ಟು ನೀರನ್ನು ಮೀಸಲಿರಿಸಲಾಗಿದೆ.
ಅಷ್ಟು ಪ್ರಮಾಣದ ನೀರನ್ನು ಬಿಟ್ಟು ಉಳಿದ 90 ಎಂ.ಸಿ.ಎïಟಿ.ಯಷ್ಟು ನೀರನ್ನು ತುಮಕೂರು ನಗರದ ನಾಗರಿಕರಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ. ಈಗ ಪ್ರತಿನಿತ್ಯ 6 ಎಂ.ಎಲ್.ಡಿ.ಯಷ್ಟು ನೀರನ್ನು ಮೈದಾಳ ಕೆರೆಯಿಂದ ಸರಬರಾಜು ಮಾಡಿಕೊಳ್ಳಲಾಗುತ್ತಿದ್ದು, ಪ್ರಸ್ತುತ ನೀರಿನ ಬಿಕ್ಕಟ್ಟು ಎದುರಾಗಿರುವುದರಿಂದ 15 ಎಂ.ಎಲ್.ಡಿ.ಯಷ್ಟು ಪ್ರಮಾಣದ ನೀರನ್ನು ಬಳಸಿಕೊಳ್ಳಲು ಮಹಾನಗರ ಪಾಲಿಕೆಯು ಯೋಜಿಸುತ್ತಿದೆ. 15 ಎಂ.ಎಲ್.ಡಿ. ಪ್ರಮಾಣದಲ್ಲೇ ಆದರೆ, ಸರಿಸುಮಾರು ಆರು ತಿಂಗಳುಗಳ ಕಾಲ ಈ ನೀರನ್ನು ಉಪಯೋಗಿಸಬಹುದೆಂದು ಲೆಕ್ಕಾಚಾರ ಮಾಡಲಾಗಿದೆ.
ಮೈದಾಳ ಕೆರೆಯಿಂದ ಬರುವ ನೀರನ್ನು ಸಮರ್ಪಕವಾಗಿ ಲಿಂಕ್ ಮಾಡಿದರೆ, ಅದರಿಂದ ನಗರದ ಬಹುತೇಕ ಬಡಾವಣೆಗಳಿಗೆ ನೀರು ಸರಬರಾಜು ಮಾಡಬಹುದು. ಟ್ಯಾಂಕರ್ ನೀರಿನ ಪೂರೈಕೆಗಿಂತಲೂ ಇದು ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗುವುದು ಎಂಬ ಬಗ್ಗೆ ಪಾಲಿಕೆಯಲ್ಲಿ ಕೆಲವು ಸದಸ್ಯರುಗಳು ಮತ್ತು ಪಾಲಿಕೆಯ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.
ಬೋರ್ ಗಳ ಬಳಕೆ
ನಗರದಲ್ಲಿ ಪಾಲಿಕೆ ಸುಪರ್ದಿನ ಒಟ್ಟು 678 ಕೊಳವೆಬಾವಿಗಳಿದ್ದು, ಇವುಗಳ ಪೈಕಿ 242 ಕೊಳವೆ ಬಾವಿಗಳು ಅಂತರ್ಜಲ ಕೊರತೆಯಿಂದ ಸಂಪೂರ್ಣ ಬತ್ತಿಹೋಗಿವೆ. ಉಳಿದ ಕೊಳವೆ ಬಾವಿಗಳಲ್ಲಿ ಲಭ್ಯವಿರುವ ನೀರನ್ನು ಪೈಪ್‍ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಅಭಾವದಿಂದ ಈ ಕೊಳವೆ ಬಾವಿಗಳಲ್ಲಿ ಸಹ ನೀರು ಯಥೇಚ್ಛವಾಗಿ ಲಭಿಸುತ್ತಿಲ್ಲವೆಂಬುದು ಕಳವಳ ಮೂಡಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
