ಚಿತ್ರದುರ್ಗ:
ಕ್ರೀಡಾಪಟುಗಳಿಗೆ ಸರ್ಕಾರ ಪ್ರೋತ್ಸಾಹ ನೀಡುವ ಮೂಲಕ ಕ್ರೀಡೆಗೆ ಮಹತ್ವದ ಸ್ಥಾನ ನೀಡಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನ್ಯಾಯವಾದಿ ಫಾತ್ಯರಾಜನ್ ಸರ್ಕಾರವನ್ನು ಒತ್ತಾಯಿಸಿದರು.
ಧಾರವಾಡದಲ್ಲಿ ಕಳೆದ ತಿಂಗಳು ನಡೆದ ಟೇಕ್ವಾಂಡೋದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ರಾಜಲಕ್ಷ್ಮಿ, ಹೆಚ್.ಭುವನ್ಕುಮಾರ್, ಜೆ.ಎಸ್.ರಾಘವೇಂದ್ರ, ಆರ್.ಗಿರೀಶ್ ಇವರುಗಳಿಗೆ ಸಿ.ಕೆ.ಪುರ ಅಂಬೇಡ್ಕರ್ ನಗರದಲ್ಲಿರುವ ಹರಳಯ್ಯ ಸಮುದಾಯ ಭವನದಲ್ಲಿ ಸನ್ಮಾನಿಸಿ ಮಾತನಾಡಿದರು.
ಟೇಕ್ವಾಂಡೋ ಕಲೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬಹುದು. ಆತ್ಮರಕ್ಷಣೆಗೆ ಟೇಕ್ವಾಂಡೋ ಅತ್ಯವಶ್ಯಕವಾಗಿದ್ದು, ಹೆಣ್ಣು ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲರೂ ತರಬೇತಿ ಪಡೆಯುವುದು ಅತ್ಯವಶ್ಯಕ. ಅದಕ್ಕಾಗಿ ಸರ್ಕಾರ ಕ್ರೀಡೆಗೆ ಹೆಚ್ಚಿನ ಬೆಂಬಲ ನೀಡಿ ಕ್ರೀಡಾಪಟುಗಳಿಗೆ ಅತ್ಯವಶ್ಯಕವಾಗಿರುವ ನೆರವು ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಡಾನ್ಬೋಸ್ಕೋ ಶಾಲೆಯ ದೈಹಿಕ ಶಿಕ್ಷಕ ರಾಯಪ್ಪ ಮಾತನಾಡಿ ಕ್ರೀಡೆಗೆ ಬಡವ-ಶ್ರೀಮಂತ ಎನ್ನುವ ಅಂತರವಿಲ್ಲ. ಯಾರಲ್ಲಿ ಪ್ರತಿಭೆಯಿದೆಯೋ ಅವರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಧಾರವಾಡದಲ್ಲಿ ನಡೆದ ಟೇಕ್ವಾಂಡೋದಲ್ಲಿ ಚಿನ್ನದ ಪದಕ ಗಳಿಸಿ ಚಿತ್ರದುರ್ಗಕ್ಕೆ ಕೀರ್ತಿ ತಂದಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಂಬಲಿಸುವುದು ಎಲ್ಲರ ಕರ್ತವ್ಯವಾಗಬೇಕೆಂದರು.
ಟೇಕ್ವಾಂಡೋ ತರಬೇತಿದಾರ ಎನ್.ಇ.ರುದ್ರೇಶ್, ನಗರಸಭೆ ಸದಸ್ಯ ದೀಪಕ್, ಮಾಜಿ ಸದಸ್ಯ ಡಿ.ಪ್ರಕಾಶ್, ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಪ್ರಕಾಶ್, ರಾಜಣ್ಣ, ಬಿಜೆಪಿ.ಮಹಿಳಾ ಮೋರ್ಚ ಉಪಾಧ್ಯಕ್ಷೆ ರೇಖ, ಸಂತೋಷ್ಕುಮಾರ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








