ಬಿಸಿಯೂಟ ತಯಾರಿಕೆ ಖಾಸಗಿ ಸಂಸ್ಥೆಗೆ ನೀಡಿದರೆ ಉಗ್ರ ಹೋರಾಟ : ಸಿ.ವೈ.ಶಿವರುದ್ರಪ್ಪ ಎಚ್ಚರಿಕೆ

ಚಳ್ಳಕೆರೆ

       ರಾಜ್ಯದ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಮಾರು 1.18 ಲಕ್ಷ ಬಿಸಿಯೂಟ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ನೀಡಿ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಇಲ್ಲಿನ ಎಐಟಿಯುಸಿ ಘಟಕ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‍ಗೆ ಮನವಿ ನೀಡಿದರು.

       ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ, ಜಿಲ್ಲಾ ಬಿಸಿಯೂಟ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಂಚಾಲಕ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ವೇತನವೂ ಸೇರಿದಂತೆ ಹಲವಾರು ಸೌಲಭ್ಯ ನೀಡುವಂತೆ ಒತ್ತಾಯಿಸುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಸರ್ಕಾರ ಮಂಡಿಸಿದ ಆಯವ್ಯಯದಲ್ಲೂ ಸಹ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಆರ್ಥಿಕ ನೆರವು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ರಾಜ್ಯದ ಕೆಲವೆಡೆ ಈಗಾಗಲೇ ಇಸ್ಕಾನ್ ಹಾಗೂ ಇತರೆ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ತಯಾರಿಕೆ ಜವಾಬ್ದಾರಿ ನೀಡಲು ಸರ್ಕಾರ ತೆರೆಮರೆಯ ಕಸರತ್ತು ನಡೆಸಿದ್ದು, ಇದನ್ನು ಈ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.

       ತಾಲ್ಲೂಕಿನಾದ್ಯಂತ ಒಟ್ಟು 486 ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿದ್ದು, 1080 ಬಿಸಿಯೂಟ ತಯಾರಿಕರು ಮತ್ತು ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನವೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ವೇಳೆಯಲ್ಲಿ ರುಚಿಕರವಾದ ಬಿಸಿಯೂಟ ತಯಾರಿಸಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಇವರಿಗೆ ಸರ್ಕಾರ ಕೇವಲ 2500 ರಿಂದ 2700 ರೂ ವರೆಗೂ ಗೌರವಧನ ನೀಡುತ್ತಿದ್ದು, ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ಗೌರವಧನ ಯಾವುದಕ್ಕೂ ಸಾಲದು. ಕಾರಣ, ಶಾಲೆಗಳಲ್ಲಿ ಅಡುಗೆ ತಯಾರಿಸುವ ಬಿಸಿಯೂಟ ತಯಾರಿಕರು ಜಾಗೃತಿಯಿಂದ ಆಹಾರವನ್ನು ತಯಾರಿಸಿ ಶಾಲಾ ಮಕ್ಕಳಿಗೆ ನೀಡಬೇಕಾಗಿದೆ. ಶಾಲಾ ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಸ್ವಚ್ಚಗೊಳಿಸಿದ ಗುಣಾತ್ಮಕ ಆಹಾರವನ್ನು ನೀಡಬೇಕಿದೆ.

       ಯಾವುದೇ ಹಂತದಲ್ಲೂ ನಿರ್ಲಕ್ಷ್ಯೆತನಕ್ಕೆ ಅವಕಾಶವಿಲ್ಲ. ಆದ್ದರಿಂದ ತಾಲ್ಲೂಕಿನಾದ್ಯಂತ ಬಿಸಿಯೂಟ ತಯಾರಿಕರು ಹಾಗೂ ಸಹಾಯಕಿಯರು ತಮ್ಮ ಶಕ್ತಿ ಮೀರಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಎಲ್ಲಾ ನೌಕರರಿಗೆ ಕನಿಷ್ಠ ಪಕ್ಷ ಕನಿಷ್ಟ ವೇತನ ಹಾಗೂ ಇತರೆ ಸೌಲಭ್ಯ ನೀಡುವಂತೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ನೀಡಿದ್ದು, ತಹಶೀಲ್ದಾರ್ ಕೂಡಲೇ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

      ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ ಮಂಜುನಾಥ, ತಮ್ಮ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಿಲ್ಲಾ ಕಾರ್ಯದರ್ಶಿ ಪಿ.ಸಕೀನಾ, ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇರುದ್ರಪ್ಪ, ನಾಗಮ್ಮ, ಎಚ್.ಎಸ್.ಮೀನಾಕ್ಷಿ, ವಿ.ವಿಜಯಮ್ಮ, ಎನ್.ನೇತ್ರಾವತಿ, ಆರ್.ಗೀತಾ, ಅನುಸೂಯಮ್ಮ, ಮಂಜಮ್ಮ, ಭಾಗ್ಯಮ್ಮ, ಸುನೀತಾ, ಎ.ಸುಮಿತ್ರಮ್ಮ, ಬಿ.ಎಚ್.ನಾಗರತ್ನ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap