ಶಿಗ್ಗಾವಿ :
ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಜವಾನ ಹುದ್ದೆಗೆ ಸ್ಥಳಿಯದವರನ್ನು ಪರಿಗಣಿಸದೆ ಸವಣೂರ ತಾಲೂಕಿನವರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಂಡಿರುವದನ್ನು ಖಂಡಿಸಿ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾರ್ಮಿಕರ ಒಕ್ಕೂಟದ ವತಿಯಿಂದ ತಾಲೂಕಾ ತಹಶೀಲ್ದಾರ ಅವರಿಗೆ ಮನವಿ ಅರ್ಪಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಕಳೆದ ಕೆಲ ತಿಂಗಳುಗಳಿಂದಖಾಲಿ ಇರುವ ಜವಾನ ಹುದ್ದೆಯನ್ನು ಕಾನೂನಿನ ಪ್ರಕಾರ ಸ್ಥಳಿಯ ತಾಲೂಕಿನವರಿಗೆ ಅವಕಾಶ ಕೊಡಬೇಕು ಆದರೆ ಕಾನೂನು ಬಾಹಿರವಾಗಿ ಸ್ಥಳಿಯ ಮಾರುತ್ತೆಪ್ಪ ಬಸಪ್ಪ ಹರಿಜನ ಅವರನ್ನು ಶಾಸಕರ ಶಿಫಾರಸ್ಸು ಪತ್ರವನ್ನು ಕೊಟ್ಟಿದ್ದರೂ ಪರಿಗಣಿಸದೇ ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಥಮ ದರ್ಜೆ ಗುಮಾಸ್ಥರಾದ ಎಮ್ ಎಸ್ ಹಿರೇಮಠ ಇವರು ಶಾಸಕರು ಸವಣೂರ ತಾಲೂಕಿನ ಶ್ರೀಮತಿ ಲಕ್ಷ್ಮೀ ಪ್ರಕಾಶ ಗುಗ್ಗಿ ಅವರನ್ನು ನೇಮಿಸಿಕೊಡಲು ಹೇಳಿದ್ದಾರೆ ಎಂದು ಉಡಾಫೆ ಉತ್ತರ ನೀಡುತ್ತಾರೆ
ಇದರಿಂದ ತಾಲೂಕಿನ ದಲಿತರಿಗೆ ಅನ್ಯಾಯವಾಗುತ್ತಿದ್ದು ಕೂಡಲೆ ತಹಶೀಲ್ದಾರರು ಪರಿಶಿಲಿಸಿ ಸ್ಥಳಿಯ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಉಪವಾಸ ಸತ್ಯಾಗ್ರಹ ಹೋರಾಟದ ಜೊತೆಗೆ ಇದಕ್ಕೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪಿ.ವೈ,ಗಾಜಿಯವರ ಹಾಗೂ ಪ್ರಥಮ ದರ್ಜೆ ಗುಮಾಸ್ಥರಾದ ಎಮ್ ಎಸ್ ಹಿರೇಮಠ ಅವರೇ ಕಾರಣರಾಗುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಅಶೋಕ ಕಾಳೆ, ಅಖಂಡ ಕರ್ನಾಟಕ ರೈತ ಸಂಘದ ತಾಲೂಕಾ ಅಧ್ಯಕ್ಷ ಮಂಜುನಾಥ ಕಂಕನವಾಡ, ಕರ್ನಾಟಕ ರಾಜ್ಯ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಸಮಿತಿಯ ಅಧ್ಯಕ್ಷ ಬಸವರಾಜ ಹಂಚಿನಮನಿ, ದಲಿತ ಮುಖಂಡರಾದ ಕರಿಯಪ್ಪ ಮಾದರ, ಶಿವಪ್ಪ ನಿಲಮ್ಮನವರ, ಶಿವಾನಂದ ಮಾದರ, ಸೇರಿದಂತೆ ಇತರರು ಇದ್ದರು.