ಹೂವಿನಹಡಗಲಿ :
ಪಟ್ಟಣದಲ್ಲಿ ಅಂದಾಜು 9 ಎಕರೆ ವಿಸ್ತೀರ್ಣದ ಸ್ಮಶಾನವನ್ನು ಒಂದು ಮಾದರಿ ಮುಕ್ತಿಧಾಮ ಮಾಡಬೇಕೆನ್ನುವುದು ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರವರ ಕಲ್ಪನೆ, ಹಂತ ಹಂತವಾಗಿ ಕಾರ್ಯರೂಪಗೊಳ್ಳುತ್ತಿರುವುದು ಪ್ರಶಂಸನೀಯವಾಗಿದೆ. ಈಗಾಗಲೇ 11 ಲಕ್ಷ ರೂ ವೆಚ್ಚದಲ್ಲಿ ಮುಕ್ತಿರಥವನ್ನು ಲೋಕಾರ್ಪಣೆಗೊಳಿಸಿ, ಉಚಿತ ಸೇವೆಗೆ ಒದಗಿಸಿದ್ದಾರೆ. ಅದೇ ರೀತಿಯಾಗಿ ಸ್ಮಶಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಒಂದು ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಈಗಾಗಲೇ ವಿಸ್ತೀರ್ಣದ ಅಷ್ಟು ಭಾಗದಲ್ಲಿಯೂ ಕೂಡಾ ಸಿ.ಸಿ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರಿಂದ ಮೂಲಸೌಲಭ್ಯಗಳ ಅಗತ್ಯತೆಯನ್ನು ಅರಿತು, ಸಚಿವ ಪಿ.ಟಿ.ಪರಮೇಶ್ವರ ನಾಯ್ಕರವರು ಹೆಚ್ಚಿನ ಪ್ರಮಾಣದಲ್ಲಿ ಪಟ್ಟಣದ ಸುಂದರೀಕರಣ ಮತ್ತು ಅಗತ್ಯ ಸೌಲಭ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ಹಿಂದೆ ಅಪೂರ್ಣಗೊಂಡಿದ್ದ, ವಿದ್ಯುತ್ಚಿತಾಗಾರವನ್ನು ಸಚಿವರು ಪೂರ್ಣಗೊಳಿಸುವುದರ ಮೂಲಕ ವಿದ್ಯುತ್ ಸ್ಪರ್ಶದಿಂದ ಶವಸಂಸ್ಕಾರ ಮಾಡುವ ಸಮುದಾಯಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಸಿ.ಸಿ. ರಸ್ತೆ, ನಂತರ ಸ್ಮಶಾನದಲ್ಲಿ ಸ್ನಾನಗೃಹ ನಿರ್ಮಾಣ ಮತ್ತು ಸ್ಮಶಾನದ ಮುಂಭಾಗದಲ್ಲಿ ಮುಕ್ತಿಧಾಮ ಎನ್ನುವ ಬೃಹದಾಕಾರದ ದ್ವಾರಬಾಗಿಲನ್ನು ನಿರ್ಮಿಸಬೇಕು ಎನ್ನುವುದು ಸ್ಥಳೀಯ ಟಿ.ಮಹಾಂತೇಶರವರ ಅಭಿಪ್ರಾಯವಾಗಿದೆ. ವಿದ್ಯುತ್ ಚಿತಾಗಾರ ದುರಸ್ಥಿಗೆ ಮತ್ತು ಮಿಷನ್ ಖರೀದಿಗಾಗಿ ಅನುದಾನವನ್ನು ನೀಡುವಂತೆ ಸಚಿವರಲ್ಲಿ ವಿನಂತಿಸಿಕೊಂಡಿದ್ದೇವೆ ಎಂದು ಹೇಳುವ ಮಹಾಂತೇಶರವರು ಸ್ಮಶಾನ ಅಭಿವೃದ್ದಿಯ ಬಗ್ಗೆ ಸಚಿವರಿಗಿರುವ ಕಾಳಜಿಯ ಬಗ್ಗೆ ಅಭಿನಂದನೆಯನ್ನು ವ್ಯಕ್ತಪಡಿಸಿದರು.
ಆದಷ್ಟು ಬೇಗನೆ ಸಚಿವರು ಮುಕ್ತಿಧಾಮದಲ್ಲಿ ಕೊರತೆ ಇರುವ ಸೌಲಭ್ಯವನ್ನು ಕಲ್ಪಿಸಿ, ಮಾದರಿ ಮುಕ್ತಿಧಾಮ ಎನ್ನುವ ಹೆಸರನ್ನು ಸ್ಥಿರವಾಗುವಂತೆ ಮಾಡಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
