ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು;ಅರುಣ

ಚಿತ್ರದುರ್ಗ:

   ಇಂದಿನ ಸ್ಪರ್ದಾತ್ಮಕ ಸಮಾಜದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅದ್ಯಯನಶೀಲರಾಗಬೇಕು ಎಂದು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಅರುಣ ಸಿ ನ್ಯೂಟನ್ ಅಭಿಪ್ರಾಯ ಪಟ್ಟರು

     ನಗರದ ಎಸ್ ಆರ್ ಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು

     ನಮ್ಮ ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಸ್ಪರ್ಧೆಯೂ ಸಹ ಹೆಚ್ಚಿದೆ. ಹಾಗಾಗಿ ನೀವು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ವಿಶ್ವದಲ್ಲಿ ಬೇರೆ ದೇಶಗಳಿಂತಲೂ ಹೆಚ್ಚು ಯುವ ಜನತೆಯನ್ನು ಭಾರತ ಹೊಂದಿದ್ದು ಈ ದೇಶದ ಪ್ರಗತಿಯು ಹೆಚ್ಚಾಗಬೇಕಿದೆ, ಆಗ ಮಾತ್ರ ಹೆಚ್ಚಾದ ಜನಸಂಖ್ಯೆ ಒಂದು ದೇಶಕ್ಕೆ ಮಾರಕವಾಗದೆ ಪೂರಕವಾಗುತ್ತದೆ ಎಂದರು.

     ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಎನ್ ಬಿ. ನಂದಗಾವಿ, ರವರು ಇಂದಿನ ದಿನಮಾನಗಳಲ್ಲಿ ಬೇರೆ ಬೇರೆ ಸಡಗರ, ಸಂಭ್ರಮದ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಆದರೆ ಇಂಥಹ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಪರೂಪ ಎಂದರು

     ಪೋಷಕರು ಮಕ್ಕಳಲ್ಲಿ ಬರಿ ಇಂಜಿನಿಯರ್, ಮೆಡಿಕಲ್ ಆಯ್ಕೆಗಳನ್ನು ಮಾತ್ರ ನೀಡದೆ, ನಿಮ್ಮ ಮಕ್ಕಳು ಯಾವ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳುತ್ತಾರೋ ಅದಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ಹೇಳಿದರು. ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ಇನ್ಫೋಸಿಸ್‍ನ ಇಂಜಿನಿಯರ್ ಮಹೇಶ್ ಕುಮಾರ್ ಮಾತನಾಡಿ ಹಣಕ್ಕಿಂತ ಗೌರವಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರಿಂದ ನಾರಾಯಣಮೂರ್ತಿಯಂತವರಿಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು ಎಸ್‍ಆರ್‍ಎಸ್ ಕಾಲೇಜು ತುಂಬಾ ನೈತಿಕ ಮೌಲ್ಯಗಳನ್ನು ಹೊಂದಿದ್ದು, ಇಂತಹ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ನಿಮ್ಮಗಳ ಸಾಧನೆಯಿಂದ ನಿಮ್ಮ ತಂದೆ ತಾಯಿಗಳ ಕಣ್ಣುಗಳಲ್ಲಿ ಆನಂದ ಭಾಷ್ಪಸುರಿಯಬೇಕು ಎಂದರು.

     ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ್ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಎನ್ನುವುದು ಎರಡು ವರ್ಷಗಳ ಅಧ್ಯಯನ ಎನ್ನುವುದಕ್ಕಿಂತ ಹದಿನೇಳು ತಿಂಗಳ ಅವಧಿಯ ಅಭ್ಯಾಸ ಎಂದರು. ಹಾಗಾಗಿ ಕಡಿಮೆ ಸಮಯದಲ್ಲಿ ನಿಮ್ಮ ಸ್ಪರ್ಧಾತ್ಮಕ ಜೀವನವನ್ನ ಹೇಗೆ ನೆಲೆಗೊಳಿಸಿಕೊಳ್ಳುವಿರಿ ಎಂಬ ಪ್ರಶ್ನೆ ನಿಮ್ಮ ಮುಂದಿದೆ, ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬಿ. ಎ. ಲಿಂಗಾರೆಡ್ಡಿ ಮಾತನಾಡಿ “ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮವನ್ನು ಪ್ರತೀವರ್ಷ ಆಯೋಜಿಸುವ ಉದ್ದೇಶವೇನೆಂದರೆ ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲೆಂಬ ಮಹದಾಸೆ. ಇನ್ಫೋಸಿಸ್‍ನಂತಹ ದೊಡ್ಡ ಸಂಸ್ಥೆಗಳಿಂದ ಅತಿಥಿಗಳನ್ನು ಆಹ್ವಾನಿಸಿ ಅವರಿಂದ ಸ್ಫೂರ್ತಿದಾಯಕ ಮಾತುಗಳನ್ನಾಡಿಸಿದಾಗ ನಮ್ಮ ವಿದ್ಯಾರ್ಥಿಗಳು ಸಹ ಅವರ ಮಟ್ಟಕ್ಕೆ ಬೆಳೆಯಬಹುದು ಎಂಬುದು ನನ್ನ ಆಸೆ ಎಂದರು.

      ಕಾರ್ಯಕ್ರಮದಲ್ಲಿ 2019ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕು. ಓಲ್‍ವಿಟಾ ಡಿಸೋಜಾ, ರಾಜ್ಯಕ್ಕೆ ಆರನೇ ರ್ಯಾಂಕ್ ಹಾಗೂ ಹತ್ತನೇ ರ್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿಗಳಾದ ಕು.ತುಳಸಿ ಟಿ., ಕು.ನೀ¯ಪ್ರಸಾದ್, ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರ್ಯಾಂಕ್ ಪಡೆದ ಕು.ಪ್ರಗ್ಯಾ ಮಿತ್ರ, ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕು.ರಮ್ಯಾ ಎಚ್.ಎನ್., ಕು.ಅವಿನಾಶ್‍ಕುಮಾರ್ ವಿ, ಕು.ಸಿದ್ಧಾರ್ಥನಾಯಕ್, ಜೆಇಇ ನಾಟಾ ಪರೀಕ್ಷೆಯಲ್ಲಿ ಆಲ್ ಇಂಡಿಯಾ ಹದಿನೆಂಟನೆ ರ್ಯಾಂಕ್ ಗಳಿಸಿದ ಕು.ಗಗನ್ದೀಪ್ ಎನ್. ಈ. ಹಾಗೂ ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿದ ಒಟ್ಟು 25 ಅತ್ಯುನ್ನತ ಸಾಧಕರನ್ನು ಸನ್ಮಾನಿಸಲಾಯಿತು.

     ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಶ್ರೀ ಬಿ.ಎಲ್. ಅಮೋಘ್, ಆಡಳಿತಾಧಿಕಾರಿಗಳಾದ ಡಾ.ರವಿ ಟಿ. ಎಸ್. ಸಂಚಾಲಕರಾದ ಶ್ರೀ ನಟರಾಜ್ ಎಂ.ವಿ. ಹಾಗೂ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link