ಬೈಕ್ ಗೆ ಕಾರು ಡಿಕ್ಕಿ : 2 ಸಾವು

ಬೆಂಗಳೂರು

     ಹಿಂದಿನಿಂದ ವೇಗವಾಗಿ ಬಂದ ಇನೋವಾ ಕಾರು ಮುಂದೆ ಹೋಗುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು ರಸ್ತೆ ವಿಭಜಕದ ಗ್ರಿಲ್ಸ್‍ಗೆ ಅಪ್ಪಳಿಸಿ ಉಪನ್ಯಾಸಕ ಸೇರಿ ಇಬ್ಬರು ಮೃತಪಟ್ಟು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕೆಆರ್‍ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಮೃತಪಟ್ಟವರನ್ನು ಕಿಮ್ಮಸಂದ್ರದ ನಾರಾಯಣ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ವೆಂಕಟ ಶೇಷರೆಡ್ಡಿ (35) ಹಾಗೂ ಕೆಆರ್ ಪುರಂನ ತೇಜಸ್ (17)ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ ಮೃತ ಶೇಷರೆಡ್ಡಿ ಅವರ ಪತ್ನಿ ಪ್ರೀತಿಗೆ ಕೈ-ಭುಜ ಮುರಿದಿದ್ದರೆ, ಮಗಳು ಕೀರ್ತಿ ಕೂಡ ಗಾಯಗೊಂಡಿದ್ದಾರೆ.

     ಇನೋವಾ ಕಾರಿನ ಚಾಲಕ ಸುಬ್ರಹ್ಮಣಿ ಸೇರಿ 6 ಮಂದಿ ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಆಂಧ್ರ ಮೂಲದ ವೆಂಕಟ ಶೇಷರೆಡ್ಡಿ ಕೆಆರ್ ಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ರಾತ್ರಿ 8.20ರ ವೇಳೆ ಕೆಆರ್ ಪುರಂನಿಂದ ಮೇಡಳ್ಳಿ ಕಡೆಗೆ ಹಳೆ ಮದ್ರಾಸ್ ರಸ್ತೆಯ ಎಂಜಿ ಬಾರ್ ಬಳಿ ಬೈಕ್‍ನಲ್ಲಿ ಪತ್ನಿ ಪ್ರೀತಿ, ಮಗಳು ಕೀರ್ತಿಯನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಇನೋವಾ ಕಾರು ಡಿಕ್ಕಿ ಹೊಡೆದು ರಸ್ತೆ ವಿಭಜಕದ ಗ್ರಿಲ್ಸ್‍ಗೆ ಅಪ್ಪಳಿಸಿದೆ.

     ಡಿಕ್ಕಿಯ ರಭಸಕ್ಕೆ ಬೈಕ್‍ನಲ್ಲಿದ್ದ ವೆಂಕಟ ಶೇಷರೆಡ್ಡಿ ಹಾಗೂ ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ತೇಜಸ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕಾರು ಚಾಲಕನ ಅತಿ ವೇಗದ ಚಾಲನೆಯೇ ಈ ದುರ್ಘಟನೆ ಕಾರಣ ಎಂದು ತಿಳಿದು ಬಂದಿದೆ.

    ಸುದ್ದಿ ತಿಳಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಆರ್ ಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಜಗದೀಶ್ ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link