ಬೆಂಗಳೂರು : ಪ್ರತ್ಯೇಕ ಅಪಘಾತದಲ್ಲಿ 4 ಸಾವು..!!

ಬೆಂಗಳೂರು

     ನಗರದ ವೈಟ್‍ಫೀಲ್ಡ್, ಕೆ.ಆರ್. ಪುರಂ ಹಾಗೂ ದೇವನಹಳ್ಳಿ ಬಳಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸಂಭವಿಸಿದ ನಾಲ್ಕು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಸಾಫ್ಟ್‍ವೇರ್ ಕಂಪನಿಯ ಉದ್ಯೋಗಿಯೊಬ್ಬರು ಸೇರಿ ನಾಲ್ವರು ಮೃತಪಟ್ಟು, ಓರ್ವ ಗಾಯಗೊಂಡಿದ್ದಾನೆ.ವೈಟ್‍ಫೀಲ್ಡ್ ಬಳಿ ಸಂಭವಿಸಿದ ಅಪಘಾತಗಳಲ್ಲಿ ಇಬ್ಬರು ಕೆ.ಆರ್. ಪುರಂನಲ್ಲಿ ಕೇರಳ ಮೂಲದ ಯುವಕ ಹಾಗೂ ದೇವನಹಳ್ಳಿ ಬಳಿ ಅಪರಿಚಿತ ಮೃತಪಟ್ಟವರಲ್ಲಿ ಸೇರಿದ್ದಾರೆ

ಐಟಿ ಉದ್ಯೋಗಿ ಸಾವು

     ವೈಟ್‍ಫೀಲ್ಡ್‍ನ ಕಾಡುಗೋಡಿ ಮುಖ್ಯರಸ್ತೆಯ ಸಫಲ್ ಎಣ್ಣೆ ಕಾರ್ಖಾನೆ ಮುಂಭಾಗ ಗುರುವಾರ ಬೆಳಿಗ್ಗೆ 8.50ರ ವೇಳೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಐಟಿ ಕಂಪನಿಯ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ.

    ಬಳ್ಳಾರಿ ಮೂಲದ ವಿಜ್ಞಾಸಾಗರ್ (23) ಮೃತಪಟ್ಟಿದ್ದು, ವೈಟ್‍ಫೀಲ್ಡ್‍ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾಸಾಗರ್ ಹೊಸಕೋಟೆಯಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದು, ಅಲ್ಲಿಂದ ಕೆಲಸಕ್ಕೆ ಬೈಕ್‍ನಲ್ಲಿ ಹೋಗುವಾಗ ಕಾಡುಗೋಡಿ ಓ ಫಾರಂ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

    ಅಪಘಾತವೆಸಗಿದ ಬಿಎಂಟಿಸಿ ಬಸ್ ಚಾಲಕನನ್ನು ಬಂಧಿಸಲಾಗಿದೆ. ಬುಧವಾರ ರಾತ್ರಿ 9.30ರ ವೇಳೆ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಸೈಕಲ್‍ನಲ್ಲಿ ಹೋಗುತ್ತಿದ್ದ ರಮೇಶ್ ಕುಮಾರ್ (45) ಎಂಬುವವರು ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.ಗುಜರಾತ್ ಮೂಲದ ರಮೇಶ್ ಕುಮಾರ್ ಕೂಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿಕೊಂಡು ವೈಟ್‍ಫೀಲ್ಡ್‍ನ ಮನೆಗೆ ಸೈಕಲ್‍ನಲ್ಲಿ ಬರುವಾಗ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಈ ಎರಡೂ ಪ್ರಕರಣಗಳನ್ನು ದಾಖಲಿಸಿರುವ ವೈಟ್‍ಫೀಲ್ಡ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.

ಕೇರಳಿಗ ಸಾವು

     ಕೆ.ಆರ್. ಪುರಂನ ಟಿನ್ ಫ್ಯಾಕ್ಟರಿಯ ಮೇಲುಸೇತುವೆ ಬಳಿ ಬೋನ್ಸ್ ಆಪ್‍ನ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಕೇರಳ ಮೂಲದ ಶರತ್ (25) ಎಂಬುವವರು ಆಯತಪ್ಪಿ ಮೃತಪಟ್ಟರೆ, ಹಿಂಬದಿ ಸವಾರ ಅಖಿಲ್ ಜೋಸೆಫ್ (26) ಗಾಯಗೊಂಡಿದ್ದಾರೆ.

     ಕೇರಳ ಮೂಲದ ಇವರಿಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ನಿನ್ನೆ ಮಧ್ಯರಾತ್ರಿ 1.30ರ ವೇಳೆ ಬೋನ್ಸ್ ಸ್ಕೂಟರ್ ತೆಗೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಅಖಿಲ್ ಜೋಸೆಫ್, ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೆ.ಆರ್. ಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಸಾವು

     ದೇವನಹಳ್ಳಿಯ ಕೋಟೆ ಕ್ರಾಸ್ ಬಳಿ ಬುಧವಾರ ರಾತ್ರಿ 9ರ ವೇಳೆ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಕಾರು ಹರಿದು ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು ಹರಿದು ಮೃತಪಟ್ಟ ವ್ಯಕ್ತಿಯು ಸುಮಾರು 60 ವರ್ಷ ವಯಸ್ಸಿನವರಾಗಿದ್ದು, ಸದ್ಯಕ್ಕೆ ಅವರ ಹೆಸರು, ವಿಳಾಸ ತಿಳಿದುಬಂದಿಲ್ಲ. ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link