10 ಕೆಜಿ ಮೆಣಸಿನಕಾಯಿಯೇ ಈತನಿಗೆ ಬ್ರೇಕ್‌ಫಾಸ್ಟ್‌!

ಶಿಲ್ಲಾಂಗ್:

     ಮೇಘಾಲಯವು  ದಟ್ಟ ಕಾಡುಗಳು ಮತ್ತು ಬೆಟ್ಟಗಳಿಂದ ಕೂಡಿದ್ದು, ನೋಡುಗರನ್ನು ಮನಸೂರೆಗೊಳಿಸುತ್ತದೆ. ಇದೀಗ ವ್ಯಕ್ತಿಯೊಬ್ಬನ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಬಟಾವ್ ಗ್ರಾಮದ ಸರಳ ರೈತ ರಾಮ್ ಪಿರ್ತುಹ್, ತನ್ನ ಅಸಾಧಾರಣ ಸಾಮರ್ಥ್ಯಗಳಿಂದ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ್ದಾರೆ. ಇನ್ನು ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

    ಹೌದು, ರಾಮ್ ಪಿರ್ತುಹ್ ಎಂಬ ವ್ಯಕ್ತಿಯು ಉಪಾಹಾರಕ್ಕೆ ಒಂದೇ ಬಾರಿಗೆ 10 ಕೆಜಿಗಿಂತ ಹೆಚ್ಚು ಒಣಮೆಣಸಿನಕಾಯಿ ತಿನ್ನುತ್ತಾನೆ. ಊಟ ಮಾಡುವಂತೆ ಮೆಣಸಿನಕಾಯಿಯನ್ನು ತಿನ್ನುವ ಈತನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಾವು ಒಂದು ಮೆಣಸಿನಕಾಯಿ ಅಪ್ಪಿತಪ್ಪಿ ತಿಂದರೆ ಕಣ್ಣಲ್ಲಿ ನೀರು ಬರುತ್ತದೆ. ಆದರೆ, ಈತನ ಕಣ್ಣಿಂದ ಒಂದು ತೊಟ್ಟೂ ನೀರು ಇಳಿಯದಿರುವುದು ಮಾತ್ರ ವಿಶೇಷ.

   ವೈರಲ್ ವಿಡಿಯೊದಲ್ಲಿ ರಾಮ್ ಯಾವುದೇ ಪ್ರತಿಕ್ರಿಯೆಯನ್ನು ತೋರಿಸದೆ ಕೆಂಪು ಮೆಣಸಿನಕಾಯಿಯನ್ನು ಪುಡಿ ಮಾಡಿ ತಿನ್ನುವುದನ್ನು ನೋಡಬಹುದು. 2021 ರಲ್ಲಿ ರಾಮ್ ಪಿರ್ತುಹ್ ಅವರ ಅಸಾಮಾನ್ಯ ದೃಶ್ಯವು ಬೆಳಕಿಗೆ ಬಂದಿತು. ಅವರು ಮೆಣಸಿನಕಾಯಿ ಚೀಲಗಳನ್ನು ತಿನ್ನುತ್ತಿರುವ ವಿಡಿಯೊ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿತ್ತು. ಇದೀಗ ಈ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಮೇಘಾಲಯದ ಈ ವ್ಯಕ್ತಿ ಒಂದೇ ಬಾರಿಗೆ 10 ಕಿಲೋಗ್ರಾಂಗಳಷ್ಟು ಒಣಮೆಣಸಿನಕಾಯಿಗಳನ್ನು ತಿನ್ನುತ್ತಾನೆ ಎಂಬ ಶೀರ್ಷಿಕೆ ನೀಡಿ, ವಿಡಿಯೊವನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

   50ರ ಹರೆಯದ ರೈತ ರಾಮ್, ಮೆಣಸಿನಕಾಯಿ ನನ್ನ ಜೀವನದ ಒಂದು ಭಾಗ. ನಾನು ಬಾಲ್ಯದಿಂದಲೂ ಅದನ್ನು ತಿನ್ನುತ್ತಿದ್ದೇನೆ. ಈಗ  ನನಗೆ ಅದು ಖಾರವಿದೆ ಎಂದೇ ಅನಿಸುತ್ತಿಲ್ಲ ಎಂದು ಹೇಳಿದರು. ಆತನ ಸಾಮರ್ಥ್ಯ ತಿಳಿದ ಜನರು ಅಚ್ಚರಿಗೊಂಡರು. ಅನೇಕ ಜನರು  ಅವನನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಕೆಲವರು ಆತನಿಗೆ ಒಣಮೆಣಸಿನಕಾಯಿಯಿಂದ ಸ್ನಾನ ಮಾಡಿಸಿದರು. ಅಷ್ಟೇ ಅಲ್ಲ, ಆತನ ಖಾಸಗಿ ಭಾಗಗಳ ಸುತ್ತಲೂ ಮೆಣಸಿನಕಾಯಿ ಹಚ್ಚಿದರು. ಅಚ್ಚರಿಯೆಂದರೆ ಆತನಿಗೆ ಅದು ಉರಿಯಾಗಲಿಲ್ಲ. ಇದು ಅಲ್ಲಿನ ಜನರನ್ನು ಆಶ್ಚರ್ಯಚಕಿತಗೊಳಿಸಿತು.

   ರಾಮ್‌ನ ಜೀವನಶೈಲಿಯು ಅವನನ್ನು ಒಬ್ಬ ಸೂಪರ್‌ಹೀರೋನಂತೆ ಕಾಣುವಂತೆ ಮಾಡಿದೆ. ಅವನು ಬೆಳಗ್ಗೆ ಎದ್ದೇಳುವಾಗ ಮೆಣಸಿನಕಾಯಿ ಚಹಾ ಕುಡಿಯುತ್ತಾನೆ. ಮಧ್ಯಾಹ್ನ ಮೆಣಸಿನಕಾಯಿ-ಮಟನ್ ಕರಿ ತಿನ್ನುತ್ತಾನೆ ಮತ್ತು ಸಂಜೆ ಹಸಿ ಮೆಣಸಿನಕಾಯಿ ತಿನ್ನುತ್ತಾನೆ. ಮೆಣಸಿನಕಾಯಿ ನನ್ನ ಔಷಧ, ಯಾವುದೂ ನನಗೆ ಅನಾರೋಗ್ಯ ತರುವುದಿಲ್ಲ ಎಂದು ಅವನು ಹೇಳಿದ್ದಾನೆ. ಮೇಘಾಲಯದ ಜೈನ್ತಿಯಾ ಬೆಟ್ಟಗಳಲ್ಲಿ ಮೆಣಸಿನಕಾಯಿ ಕೃಷಿ ಸಾಮಾನ್ಯ. ಆದರೆ ರಾಮ್ ಅವನಂತಹವರು ಯಾರೂ ಇಲ್ಲ. ಈತ ಮೆಣಸಿನಕಾಯಿ ತಿನ್ನುತ್ತಿರುವ ಹಳೆಯ ವಿಡಿಯೊ ಮತ್ತೊಮ್ಮೆ ವೈರಲ್ ಆಗುತ್ತಿದೆ.

Recent Articles

spot_img

Related Stories

Share via
Copy link