ನವದೆಹಲಿ:
ಕೆಲ ದಿನಗಳ ಹಿಂದೆ ಒರಿಸ್ಸಾದ ಸಂಬಲ್ ಪುರದಲ್ಲಿ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಿದ್ದ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರ ಅಮಾನತು ಆದೇಶವನ್ನು ತಡೆ ಹಿಡಿಯಲಾಗಿದೆ.
ಏಪ್ರಿಲ್ 18ರಂದು ಮೊಹಮ್ಮದ್ ಮೊಹ್ಸಿನ್ ಒರಿಸ್ಸಾದಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಚುನಾವಣಾ ಪ್ರಚಾರಕ್ಕೆಂದು ಬಂದಿದ್ದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದರು. ಎಸ್ಪಿಜಿಯಿಂದ ವಿಶೇಷ ರಕ್ಷಣೆ ಪಡೆದಿರುವವರ ವಾಹನಗಳನ್ನು ತಪಾಸಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಆರೋಪದ ಮೇಲೆ ಚುನಾವಣಾ ಆಯೋಗ ಮೊಹ್ಸಿನ್ ಅವರನ್ನು ಅಮಾನತು ಮಾಡಿತ್ತು.
ಅಮಾನತಿನ ಬಳಿಕ ಮೊಹ್ಸಿನ್ ಚುನಾವಣೆ ಸಂದರ್ಭದಲ್ಲಿ ಎಲ್ಲರ ವಾಹನವನ್ನೂ ತಪಾಸಣೆ ಮಾಡಬೇಕಾಗುತ್ತದೆ ಎಂದು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು. ಕೆಲ ದಿನಗಳ ನಂತರ ಅವರನ್ನು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಯ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.
ಅವರನ್ನು ಅಮಾನತುಗೊಳಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಿರುವ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊಹ್ಸಿನ್ ಅವರು ಕೆಲಸದಲ್ಲಿ ಮುಂದುವರಿಯಬಹುದು. ಅವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಎಸ್ಪಿಜಿ ಭದ್ರತೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರು ಏನು ಬೇಕಾದರೂ ಮಾಡಬಹುದು ಎಂದು ಅರ್ಥವಲ್ಲ ಎಂದು ಹೇಳಿದೆ.