ನವದೆಹಲಿ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಗರಿಕರಿಗೆ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಜೂನ್ 21 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ದೆಹಲಿ ಸರ್ಕಾರದ ಜಲ ಖಾತೆ ಸಚಿವೆ ಅತಿಶಿ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹರಿಯಾಣ ತನ್ನ ರಾಜಧಾನಿಯ ಪಾಲಿನ ನೀರನ್ನು ಬಿಡುಗಡೆ ಮಾಡದ ಕಾರಣ ಇಂದು ದೆಹಲಿಯುಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದೆ ಎಂದು ಹೇಳಿದರು.
ನಿನ್ನೆ, ಹರಿಯಾಣ ದೆಹಲಿಗೆ 613 ಎಂಜಿಡಿ ಬದಲಿಗೆ 513 ಎಂಜಿಡಿ ನೀರನ್ನು ಬಿಡುಗಡೆ ಮಾಡಿದೆ. ಒಂದು ಎಂಜಿಡಿ ನೀರು 28,500 ಜನರಿಗೆ ಸಾಕಾಗುತ್ತದೆ. ಇದರರ್ಥ 28 ಲಕ್ಷಕ್ಕೂ ಹೆಚ್ಚು ಜನರಿಗೆ ನೀರು ಬಿಡುಗಡೆ ಮಾಡಲಾಗಿಲ್ಲ ಎಂದು ಅವರು ವಿವರಿಸಿದರು.
ದೆಹಲಿ ನಾಗರಿಕರು ಬಿಸಿಲಿನ ಝಳದ ಸಮಸ್ಯೆಯನ್ನು ಮಾತ್ರವಲ್ಲದೆ ನೀರಿನ ಕೊರತೆಯನ್ನೂ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜೂನ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.
ಈ ಸಮಸ್ಯೆಯನ್ನು ಪರಿಹರಿಸಲು ಹರಿಯಾಣ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇವೆ ಎಂದು ಸಚಿವೆ ಅತಿಶಿ ತಿಳಿಸಿದ್ದಾರೆ.