ಮನೆಯಲ್ಲಿ ಎಸಿ ಸ್ಫೋಟ : 4 ಸಾವು….!

ಫರಿದಾಬಾದ್:

    ಹರಿಯಾಣದ ಫರಿದಾಬಾದ್‌ನಲ್ಲಿ ಸೋಮವಾರ ಮಧ್ಯರಾತ್ರಿ ಏರ್ ಕಂಡಿಷನರ್ ಕಂಪ್ರೆಸರ್  ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಸದಸ್ಯರು ಮತ್ತು ಅವರು ಸಾಕಿದ್ದ ನಾಯಿ ಸಾವನ್ನಪ್ಪಿದ್ದು, ಈ ದುರಂತವು ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿದೆ.

   ಮೃತರನ್ನು ಸಚಿನ್ ಕಪೂರ್, ಆತನ ಪತ್ನಿ ರಿಂಕು ಕಪೂರ್, ಮತ್ತು ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ಈ ಘಟನೆಯು ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಮಧ್ಯರಾತ್ರಿ 1:30ರ ಸುಮಾರಿಗೆ ಸಂಭವಿಸಿತು. ಏಸಿ ಸ್ಫೋಟದಿಂದ ದಟ್ಟವಾದ ಹೊಗೆ ಎರಡನೇ ಮಹಡಿಗೆ ತಲುಪಿತು, ಅಲ್ಲಿ ಕಪೂರ್ ಕುಟುಂಬ ಮಲಗಿತ್ತು. ಮೊದಲ ಮಹಡಿಯ ಮನೆ ಖಾಲಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೊಗೆಯಿಂದ ಉಸಿರುಗಟ್ಟಿ ಸಚಿನ್, ರಿಂಕು ಮತ್ತು ಸುಜನ್ ಸಾವನ್ನಪ್ಪಿದ್ದಾರೆ. ಆದರೆ, ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ಅವರ ಮಗ ಕಿಟಕಿಯಿಂದ ಹಾರಿ ತಪ್ಪಿಸಿಕೊಂಡಿದ್ದಾನೆ. ಆತ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ

   ಸ್ಫೋಟದ ಜೋರಾದ ಶಬ್ದಕ್ಕೆ ಎಚ್ಚರಗೊಂಡ ನೆರೆಹೊರೆಯವರಾದ ಮಯಾಂಕ್, “ನಾವು ತಕ್ಷಣ ಕಟ್ಟಡದ ಇತರ ಜನರನ್ನು ರಕ್ಷಿಸಲು ಧಾವಿಸಿದೆವು” ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ. ನಾಲ್ಕನೇ ಮಹಡಿಯಲ್ಲಿ ಏಳು ಜನರ ಕುಟುಂಬವಿತ್ತು, ಮೂರನೇ ಮಹಡಿಯನ್ನು ಸಚಿನ್ ಕಪೂರ್ ತಮ್ಮ ಕಚೇರಿಯಾಗಿ ಬಳಸುತ್ತಿದ್ದರು ಎಂದು ಅವರು ಹೇಳಿದ್ದಾರೆ. 

   ಪೊಲೀಸರು ಘಟನೆಯ ಸ್ಥಳಕ್ಕೆ ಆಗಮಿಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಫೋಟದ ನಿಖರ ಕಾರಣವನ್ನು ತಿಳಿಯಲು ತನಿಖೆ ನಡೆಯುತ್ತಿದೆ. ಈ ಘಟನೆಯು ಏರ್ ಕಂಡಿಷನರ್‌ಗಳ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯ ಘಟನೆಗಳು ಇತ್ತೀಚಿನ ತಿಂಗಳುಗಳಲ್ಲಿ ವರದಿಯಾಗಿವೆ. ಮಾರ್ಚ್‌ನಲ್ಲಿ ದೆಹಲಿಯ ಕೃಷ್ಣ ನಗರದಲ್ಲಿ ಒಬ್ಬ ವ್ಯಕ್ತಿ ಏಸಿ ಕಂಪ್ರೆಸರ್ ಸ್ಫೋಟದಿಂದ ಸಾವನ್ನಪ್ಪಿದ್ದರು. ಮೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಕಂಪ್ರೆಸರ್ ಸರ್ವಿಸಿಂಗ್ ವೇಳೆ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು.

   ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಏರಿಕೆಯಿಂದಾಗಿ ಏರ್ ಕಂಡಿಷನರ್‌ಗಳ ಬಳಕೆ ವಿಪರೀತವಾಗಿ ಹೆಚ್ಚಾಗಿದೆ. ಕಳೆದ ವರ್ಷದ ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ (IEA) ವರದಿಯ ಪ್ರಕಾರ, ಭಾರತದ ಏಸಿ ಬಳಕೆ ಮತ್ತು ವಿದ್ಯುತ್ ಖರ್ಚು ಶೀಘ್ರದಲ್ಲಿಯೇ ಇತರ ಅನೇಕ ರಾಷ್ಟ್ರಗಳನ್ನು ಮೀರಿಸಲಿದೆ. ಈ ಏರಿಕೆಯಿಂದಾಗಿ ಏಸಿ ಸಂಬಂಧಿತ ಸುರಕ್ಷತಾ ಮಾನದಂಡಗಳ ಅಗತ್ಯವು ಇನ್ನಷ್ಟು ಮಹತ್ವ ಪಡೆದಿದೆ.

Recent Articles

spot_img

Related Stories

Share via
Copy link