ನವದೆಹಲಿ:
ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖೇಶ್ ಅಹ್ಲಾವತ್ ಮತ್ತು ಸಂಜಯ್ ಸಿಂಗ್ ಸೇರಿದಂತೆ ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಮುನ್ನ ಬಿಜೆಪಿ ಎಎಪಿ ಶಾಸಕರನ್ನು ಖರೀದಿಸಲು ಪ್ರಯತ್ನಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿಯ ನೋಟಿಸ್‌ಗೆ ಪಕ್ಷದ ನಾಯಕರು ಪ್ರತಿಕ್ರಿಯಿಸಲು ವಿಫಲವಾಗಿದ್ದರು. ಈ ಸಂಬಂಧ ಎಸಿಬಿ ಕ್ರಮ ಕೈಗೊಳ್ಳಬಹುದು.
ಫೆಬ್ರವರಿ 7 ರಂದು, ಬಿಜೆಪಿ ಆಪ್ ನಾಯಕರನ್ನು ಖರೀದಿಸಲು ಹಣದ ಆಮಿಷವೊಡ್ಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ನಾಯಕರು ಆರೋಪ ಮಾಡಿದ್ದರು. ಈ ಸಂಬಂಧ ಎಸಿಬಿ ಆಪ್ ನಾಯಕ ಮುಖೇಶ್ ಅಹ್ಲಾವತ್ ಅವರಿಗೆ ನೋಟಿಸ್ ನೀಡಿತ್ತು. ಪಕ್ಷದ ಶಾಸಕರು ಭಾಗಿಯಾಗಿರುವ ಲಂಚ ಯತ್ನಗಳ ತನಿಖೆಗೆ ಹಾಜರಾಗುವಂತೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೂ ಪ್ರತ್ಯೇಕ ನೋಟಿಸ್ ಕಳುಹಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಎಸಿಬಿ ತನಿಖೆಗೆ ಆದೇಶಿಸಿದ್ದರು. ಅವರ ಆದೇಶದ ಕೆಲವೇ ಗಂಟೆಗಳಲ್ಲಿ ಎಸಿಬಿ ಅರವಿಂದ್ ಕೇಜ್ರಿವಾಲ್ ಅವರ ಮನೆ ದಾಳಿ ನಡೆಸಿತ್ತು.
ಫೆಬ್ರವರಿ 8 ರಂದು ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ಬಿಜೆಪಿ, ತಮ್ಮ ಪಕ್ಷದ 16 ಅಭ್ಯರ್ಥಿಗಳನ್ನು ಖರೀಸಿಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದರು. ಆಪ್ ಅಭ್ಯರ್ಥಿಗಳು, ಬಿಜೆಪಿ ಸೇರಿದರೆ ಸಚಿವ ಸ್ಥಾನ ಮತ್ತು ತಲಾ 15 ಕೋಟಿ ರೂ.ಗಳ ನೀಡುವ ಆಫರ್ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು.
ದೆಹಲಿ ಚುನಾವಣೆಯಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಹೀನಾಯವಾಗಿ ಸೋಲನ್ನು ಕಂಡಿದೆ. ಸತತ ಹತ್ತು ವರ್ಷ ಆಡಳಿತ ನಡೆಸಿದ್ದ ಪಕ್ಷ ಬಿಜೆಪಿ ಎದುರು ಮುಗ್ಗರಿಸಿದೆ. 27 ವರ್ಷಗಳ ಬಳಿಕ ಬಿಜೆಪಿ ದೆಹಲಿ ಗದ್ದುಗೆ ಏರಲಿದೆ. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಸೋಲನ್ನು ಕಂಡಿದ್ದಾರೆ.
