ನವದೆಹಲಿ:
ಜಾಗತಿಕ ತಾಪಮಾನದ ಹೆಚ್ಚಳದಿಂದ ಇತ್ತೀಚೆಗೆ ಉಂಟಾಗುತ್ತಿರುವ ಹವಾಮಾನ ಬದಲಾವಣೆ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರಕ್ಕೆ ತೀವ್ರ ತೊಂದರೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಮಂಡನೆಯಾದ ವರದಿಯೊಂದು ಹೇಳಿದೆ.
ಬಿಸಿಲಾಘಾತದಂತಹ ಹವಾಮಾನ ಬದಲಾವಣೆ ಸಂಕಷ್ಟ ಭಾರತದಲ್ಲಿನ ಕೃಷಿ ಕಾರ್ಮಿಕರ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡುತ್ತಿದೆ .ಇದರಿಂದ ಭಾರತದ ಕೃಷಿ ಉತ್ಪನ್ನದಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಲ್ಯಾನ್ಸೆಟ್ ಕೌಂಟ್ಡೌನ್ ವರದಿ ಹೇಳಿದೆ
ಹೆಚ್ಚುತ್ತಿರುವ ಬಿಸಿಲಾಘಾತಕ್ಕೆ ಕೃಷಿ ಕಾರ್ಮಿಕರು ತತ್ತರಿಸುತ್ತಿದ್ದಾರೆ. ಇದರಿಂದ ಭಾರತದ ಆರ್ಥಿಕತೆಗೆ ಕೃಷಿ ಕ್ಷೇತ್ರದಿಂದ ದಕ್ಕಬೇಕಿದ್ದ ಸಂಭಾವ್ಯ ಆದಾಯ ದಕ್ಕುತ್ತಿಲ್ಲ. ಇತ್ತೀಚಿನ 2023ರ ವರ್ಷವನ್ನೇ ಪರಿಗಣಿಸಿದರೆ ಸುಮಾರು ₹6 ಲಕ್ಷ ಕೋಟಿ ಕೃಷಿ ಆದಾಯ ನಷ್ಟವಾಗಿದೆ ಎಂದು ವರದಿ ಹೇಳಿದೆ.
2023ರಲ್ಲಿ ತೀವ್ರ ಬಿಸಿಲಿಗೆ ಕೃಷಿ ಕಾರ್ಮಿಕರ ಕೆಲಸದ ಸಂಭಾವ್ಯ ಅವಧಿ 1,810 ಕೋಟಿ ಗಂಟೆಯಷ್ಟು ನಷ್ಟವಾಗಿದೆ ಎಂದು ವರದಿ ತಿಳಿಸಿದೆ.1990-1999 ರ ದಶಕಕ್ಕೆ ಹೋಲಿಸಿದರೆ ಇತ್ತೀಚೆಗೆ ಭಾರತದಲ್ಲಿ ಕೃಷಿ ಕಾರ್ಮಿಕರ ಕೆಲಸದ ಸಂಭಾವ್ಯ ಅವಧಿ ಶೇ 50 ರಷ್ಟು ನಷ್ಟವಾಗುತ್ತಿದೆ ಎಂದು ವರದಿ ಹೇಳಿದೆ.
ಹೆಚ್ಚುತ್ತಿರುವ ತಾಪಮಾನದಿಂದ ಭಾರತದಲ್ಲಿ ಮಕ್ಕಳು ಹಾಗೂ 65 ವರ್ಷ ವಯಸ್ಸು ಮೀರಿದ ವ್ಯಕ್ತಿಗಳು ಬಿಸಿಲಿಗೆ ತೆರೆದುಕೊಳ್ಳುತ್ತಿರುವ ಸಮಯವೂ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.2023 ರಲ್ಲಿ ಭಾರತದಲ್ಲಿ ಮಕ್ಕಳು ಹಾಗೂ 65 ವರ್ಷ ವಯಸ್ಸು ಮೀರಿದ ವ್ಯಕ್ತಿಗಳು 100 ದಿನಗಳಷ್ಟು ಭಾರಿ ಬಿಸಿಲಿಗೆ ಮೈಯೊಡ್ಡಿದ್ದರು. ಅಂದರೆ ಇವರು ಸರಾಸರಿ 2,400 ಗಂಟೆಯಷ್ಟು ಭಾರಿ ಬಿಸಿಲಿನಿಂದ ಬಳಲಬೇಕಾಯಿತು. 1990-1999 ರ ದಶಕಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ 47ರಿಂದ 58ಕ್ಕೆ ಏರಿಕೆಯಾಗಿದೆ ಎಂದು ವರದಿ ಎಚ್ಚರಿಸಿದೆ.
ಜಾಗತಿಕವಾಗಿ ಮನುಷ್ಯರ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿರುವ 15 ಪ್ರಮುಖ ಅಂಶಗಳಲ್ಲಿ 10 ಅಂಶಗಳು ಹವಾಮಾನ ಬದಲಾವಣೆಯಿಂದಲೇ ಘಟಿಸುತ್ತಿವೆ ಎಂದು ಈ ವರದಿ ಕಂಡುಕೊಂಡಿದೆ. ಅದರಲ್ಲೂ ರಾತ್ರಿ ಹೊತ್ತಿನಲ್ಲೂ ಹೆಚ್ಚುತ್ತಿರುವ ತಾಪಮಾನ, ಭಾರಿ ಮಳೆ, ಬರದಂತಹ ಸನ್ನಿವೇಶಗಳ ಕೊಡುಗೆ ಹೆಚ್ಚಿದೆ ಎಂದು ಹೇಳಿದೆ.
ಲ್ಯಾನ್ಸೆಟ್ ಕೌಂಟ್ಡೌನ್ ವರದಿಯು 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಅಧ್ಯಯನ ನಡೆಸಿದ್ದು, ಜಾಗತಿಕ ತಾಪಮಾನ ಜಾಗತಿಕವಾಗಿ ಮನುಷ್ಯರ ಆರೋಗ್ಯದ ಮೇಲೆ ಹಾಗೂ ಹವಾಮಾನ ಬದಲಾವಣೆ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಕಂಡುಕೊಂಡಿದೆ.ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಹವಾಮಾನ ಸಂಸ್ಥೆ ಸಹಯೋಗದೊಂದಿಗೆ ಜಗತ್ತಿನ 57 ಸಂಸ್ಥೆಗಳ 127 ತಜ್ಞರು ಈ ವರದಿಯನ್ನು ಸಿದ್ದಪಡಿಸಿದ್ದಾರೆ. ವಿಶ್ವಸಂಸ್ಥೆಯ 29ನೇ ‘COP29’ ಸಮಾವೇಶದಲ್ಲಿ ಇದು ಮಂಡನೆಯಾಗಿದೆ.