ಕೇರಳ :
ಪ್ರಾಣ ಉಳಿಸಲೆಂದು ಇರುವ ಏರ್ಬ್ಯಾಗ್ ಮಗುವೊಂದರ ಜೀವ ತೆಗೆದಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ . ಕೇರಳದ ಮಲಪ್ಪುರಂ ಜಿಲ್ಲೆಗಳಲ್ಲಿ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿ ಏರ್ಬ್ಯಾಗ್ ತೆರೆದ ಕಾರಣ ಉಸಿರುಗಟ್ಟಿ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಮಗು ತನ್ನ ಕುಟುಂಬ ಸದಸ್ಯರೊಂದಿಗೆ ಕೊಟ್ಟಕ್ಕಲ್-ಪಡಪರಂಬು ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಕಾರು ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ ಮತ್ತು ಡಿಕ್ಕಿಯ ಪರಿಣಾಮದ ಏರ್ ಬ್ಯಾಗ್ ತಕ್ಷಣವೇ ಓಪನ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮುಂಭಾಗದ ಸೀಟಿನಲ್ಲಿ ತನ್ನ ತಾಯಿಯ ಮಡಿಲಲ್ಲಿ ಕುಳಿತಿದ್ದ ಮಗು ಏರ್ಬ್ಯಾಗ್ಗೆ ಮುಖ ಒತ್ತಿದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದೆ. ತಾಯಿ ಸೇರಿದಂತೆ ಇತರ ನಾಲ್ವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.