ನವದೆಹಲಿ:
ಯೂರೋಪಿನ ವೈಮಾನಿಕ ಕಂಪನಿ ಏರ್ ಬಸ್ ನಿಂದ 250 ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುತ್ತಿದೆ. 40 ವೈಡ್ ಬಾಡಿ ವಿಮಾನಗಳು ಸೇರಿದಂತೆ 250 ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ಮಂಗಳವಾರ ತಿಳಿಸಿದ್ದಾರೆ.
ಟಾಟಾ ಗ್ರೂಪ್ ಮಾಲೀಕತ್ವದ ವಿಮಾನಯಾನ ಸಂಸ್ಥೆ 40 ವೈಡ್ ಬಾಡಿಯ ಎ 350 ವಿಮಾನಗಳು ಮತ್ತು 210 ನ್ಯಾರೋ ಬಾಡಿ ವಿಮಾನಗಳನ್ನು ಖರೀದಿಸಲಿದೆ.
ಪ್ರಧಾನಿ ನರೇಂದ್ರ ಮೋದಿ, ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ಮತ್ತಿತರರು ವರ್ಚಯಲ್ ನಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿಮಾನಗಳ ಖರೀದಿಗಾಗಿ ಏರ್ ಬಸ್ ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪತ್ರಕ್ಕೆ ಸಹಿ ಪಡೆಯಲಾಗಿದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.
ಒಟ್ಟಾರೆಯಾಗಿ ಏರ್ ಇಂಡಿಯಾ 470 ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದ್ದು, ಈ ಪೈಕಿ 220 ವಿಮಾನಗಳನ್ನು ಬೋಯಿಂಗ್ ಕಂಪನಿಯಿಂದ ಖರೀದಿಸಲಿದೆ ಎನ್ನಲಾಗಿದೆ. ಟಾಟಾ ಗ್ರೂಪ್ ಕಳೆದ ವರ್ಷ ಜನವರಿಯಲ್ಲಿ ಏರ್ ಇಂಡಿಯಾವನ್ನು ವಶಕ್ಕೆ ಪಡೆದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
