ಬೆಂಗಳೂರು:
ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರಸ್ನಾನ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಕುಂಭ ಮೇಳಕ್ಕೆ ಭಕ್ತರು ಹರಿದು ಬರುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ವಿಐಪಿಗಳು ಕೂಡ ಇಲ್ಲಿ ಮಿಂದು ಪುನೀತರಾಗಿದ್ದಾರೆ. ಇದೀಗ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಕೂಡ ಇಲ್ಲಿ ಪಾಲ್ಗೊಂಡಿದ್ದು, ಪವಿತ್ರ ಸ್ನಾನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಆನಂದಿಸಿದ್ದಾರೆ.
ಡಿಕೆಶಿ ಪುತ್ರಿ ಹಾಗೂ ಉದ್ಯಮಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಅವರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದು, ಆ ಸುಂದರ ಕ್ಷಣಗಳ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸರಳ ಡ್ರೆಸ್‌ನಲ್ಲಿ ಸಾಮಾನ್ಯರ ನಡುವೆ ಮಹಾ ಕುಂಭ ಮೇಳವನ್ನು ಅವರು ಸುತ್ತಾಡಿದ್ದಾರೆ. ಮಾಸ್ಕ್ ಧರಿಸಿ ಕುಂಭ ಮೇಳದ ಪ್ರತಿಯೊಂದು ಜಾಗವನ್ನೂ ವೀಕ್ಷಣೆ ಮಾಡಿದ ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ನಂತರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ಅದರ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಮಹಾಕುಂಭ 2025, ಇದು ಪದಗಳಿಗೆ ಮೀರಿದ ಅನುಭವ. ವಿಶ್ವದ ಅತಿದೊಡ್ಡ ಕೂಟಗಳಲ್ಲಿ ಒಂದಾದ ಸಂಪೂರ್ಣ ಶಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಆಳವು ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಅಷ್ಟೇ ಅಲ್ಲ, ಭಕ್ತಿ ಮತ್ತು ಸಾಮೂಹಿಕ ಪ್ರಜ್ಞೆಯು ನಿಜವಾಗಿಯೂ ದೈವಿಕವೆನಿಸುವ ವಾತಾವರಣವನ್ನು ಸೃಷ್ಟಿಸಿದೆ ಎಂದು ಐಶ್ವರ್ಯ ಬರೆದಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ದಿ ಸೇಕ್ರೆಡ್ ಶಿಫ್ಟ್ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಂಡಿದ್ದಾರೆ. ದಿ ಸೇಕ್ರೆಡ್ ಶಿಫ್ಟ್ ಕಾನ್‌ಕ್ಲೇವ್‌ನಲ್ಲಿ ಅವರು ಪ್ಯಾನೆಲಿಸ್ಟ್ ಆಗಿದ್ದು, ಈ ವೇಳೆ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ರಿಕಿ ಕೇಜ್ ಜೊತೆಗಿನ ಸಂಭಾಷಣೆ ಮತ್ತು ಅವರ ಆಳವಾದ ಬುದ್ಧಿವಂತಿಕೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಐಶ್ವರ್ಯ ಬರೆದಿದ್ದಾರೆ.
ಫೆಬ್ರವರಿ 9 -10 ರಂದು ಡಿಕೆಶಿ, ಮಹಾ ಕುಂಭ ಮೇಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಅದಕ್ಕೂ ಮುನ್ನ ಮಗಳು ಐಶ್ವರ್ಯ ಭೇಟಿ ನೀಡಿದ್ದಾರೆ. ಐಶ್ವರ್ಯ ವಿಡಿಯೋ ನೋಡಿ ನೆಟಿಜೆನ್‌ಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮಹಾಕುಂಭ ಮೇಳಕ್ಕೆ ಭೇಟಿ ನೀಡುವ ಅವಕಾಶ ನಿಮಗೆ ಸಿಕ್ಕಿದ್ದು, ನೀವು ಪುಣ್ಯವಂತರು ಎಂದಿದ್ದಾರೆ. ಮಹಾ ಕುಂಭ ಮೇಳ ಇದೇ ಫೆಬ್ರವರಿ 26ಕ್ಕೆ ಮುಕ್ತಾಯಗೊಳ್ಳಲಿದೆ.
