ಲಖನೌ:
2022 ರಿಂದ ಉತ್ತರ ಪ್ರದೇಶ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರ್ಹಾಲ್ ಕ್ಷೇತ್ರದ ಶಾಸಕರಾಗಿದ್ದ ಅಖಿಲೇಶ್ ಯಾದವ್ ಅವರು ಇತ್ತೀಚಿಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಕನೌಜ್ ಕ್ಷೇತ್ರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಖಿಲೇಶ್ ಯಾದವ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಅಸೆಂಬ್ಲಿ ಸ್ಪೀಕರ್ ಸತೀಶ್ ಮಹಾನಾ ಅವರಿಗೆ ರವಾನಿಸಿದ್ದಾರೆ.
ರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಕನೌಜ್ ಸಂಸದ ಅಖಿಲೇಶ್ ಯಾದವ್ ಅವರು, ಲೋಕಸಭೆಯಲ್ಲಿ ಎಸ್‌ಪಿ ನಾಯಕರಾಗಲಿದ್ದಾರೆ.
ಏತನ್ಮಧ್ಯೆ, ಅಯೋಧ್ಯೆ ಸಂಸದರಾಗಿ ಆಯ್ಕೆಯಾದ ಮಿಲ್ಕಿಪುರದ ಹಾಲಿ ಶಾಸಕ ಅವಧೇಶ್ ಪ್ರಸಾದ್ ಕೂಡ ಬುಧವಾರ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.