ರಾಂಚಿ:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎರಡನೆ ದಿನ ಸುಮಾರು ಆರು ಗಂಟೆಗಳ ವಿಚಾರಣೆಯ ನಂತರ 70 ವರ್ಷದ ಆಲಂ ಅವರನ್ನು ಮನಿ ಲಾಂಡರಿಂಗ್ ಆಕ್ಟ್(ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ತನಿಖಾ ಸಂಸ್ಥೆಯ ವಲಯ ಕಚೇರಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫೆಡರಲ್ ಏಜೆನ್ಸಿ ಮಂಗಳವಾರ ಒಂಬತ್ತು ಗಂಟೆಗಳ ಕಾಲ ಜಾರ್ಖಂಡ್ ಸಚಿವರನ್ನು ತೀವ್ರ ವಿಚಾರಣೆ ನಡೆಸಿತ್ತು ಮತ್ತು ಅವರ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದೆ.
ತನಿಖಾ ಸಂಸ್ಥೆಯು ಕಳೆದ ವಾರ ಆಲಂ ಅವರ ಆಪ್ತ ಕಾರ್ಯದರ್ಶಿ ಮತ್ತು ರಾಜ್ಯ ಆಡಳಿತ ಸೇವಾ ಅಧಿಕಾರಿ ಸಂಜೀವ್ ಕುಮಾರ್ ಲಾಲ್(52) ಮತ್ತು ಮನೆಯ ಸಹಾಯಕ ಜಹಾಂಗೀರ್ ಆಲಂ(42) ಅವರನ್ನು ಬಂಧಿಸಿದ ನಂತರ ಅವರಿಗೆ ಸಂಬಂಧಿಸಿದ ಫ್ಲಾಟ್ ಮೇಲೆ ದಾಳಿ ನಡೆಸಿ 32 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿತ್ತು.
ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಪಾದಿತ ಅಕ್ರಮಗಳು ಮತ್ತು “ಲಂಚ”ಕ್ಕೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ತನಿಖೆ ನಡೆಯುತ್ತಿದೆ.
ಇಬ್ಬರು ಬಂಧಿತ ವ್ಯಕ್ತಿಗಳನ್ನು ತನ್ನ ಕಸ್ಟಡಿಗೆ ಕೋರಿದಾಗ, ಕೆಲವು ಪ್ರಭಾವಿ ವ್ಯಕ್ತಿಗಳ ಪರವಾಗಿ ಸಂಜೀವ್ ಕುಮಾರ್ ಲಾಲ್ “ಕಮಿಷನ್” ಸಂಗ್ರಹಿಸಿದ್ದಾರೆ ಮತ್ತು ಗ್ರಾಮೀಣ ಇಲಾಖೆಯಲ್ಲಿ “ಮೇಲಿಂದ ಕೆಳಗಿನ” ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಇಡಿ ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ತಿಳಿಸಿತ್ತು.