ಜಮ್ಮು:
ಕಳೆದ 13 ದಿನಗಳಲ್ಲಿ ಸುಮಾರು 2.66 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಯಾತ್ರೆ ನೆರವೇರಿಸಿದ್ದು, ಶುಕ್ರವಾರ 4,434 ಯಾತ್ರಾರ್ಥಿಗಳನ್ನೊಳಗೊಂಡ ತಂಡ ಕಾಶ್ಮೀರದಿಂದ ತೆರಳಿತು. ಈ ಬಾರಿ ಅಮರನಾಥ ಯಾತ್ರೆಗೆ ಆಗಮಿಸುವ ಯಾತ್ರಿಗಳ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ ಮತ್ತು ಯಾತ್ರಾರ್ಥಿಗಳ ಉತ್ಸಾಹ ಮುಂದುವರೆದಿದೆ ಎಂದು ಅಮರನಾಥ ದೇವಾಲಯ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.
ಜೂನ್ 29 ರಂದು ಯಾತ್ರೆ ಪ್ರಾರಂಭವಾದಾಗಿನಿಂದ, ಗುರುವಾರದವರೆಗೆ 2.66 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹೆಯೊಳಗೆ ‘ಹಿಮಲಿಂಗದ ದರ್ಶನ’ ಪಡೆದ್ದಾರೆ. ಗುಹೆ ದೇಗುಲವನ್ನು ತಲುಪಲು ದಕ್ಷಿಣ ಮತ್ತು ಉತ್ತರ ಬೇಸ್ ಕ್ಯಾಂಪ್ ನಿಂದ ಹೆಲಿಕಾಪ್ಟರ್ ಸೇವೆ ಬಳಸಿದ 10,000 ಕ್ಕೂ ಹೆಚ್ಚು ಯಾತ್ರಿಕರು ಇದರಲ್ಲಿ ಸೇರಿದ್ದಾರೆ.
ಈ ಗುಹೆಯು ಕಾಶ್ಮೀರ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಯಾತ್ರಾರ್ಥಿಗಳು ಸಾಂಪ್ರದಾಯಿಕ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಅಥವಾ ಉತ್ತರ ಕಾಶ್ಮೀರದ ಬಲ್ಟಾಲ್ ಮಾರ್ಗದಿಂದ ಗುಹಾ ದೇವಾಲಯಕ್ಕೆ ಪ್ರಯಾಣಿಸುತ್ತಾರೆ. ಶುಕ್ರವಾರ, 4434 ಯಾತ್ರಿಗಳು ಕಾಶ್ಮೀರದಿಂದ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದತ್ತ ಎರಡು ಬೆಂಗಾವಲು ಪಡೆಯಲ್ಲಿ ಹೊರಟರು.
64 ವಾಹನಗಳಲ್ಲಿ 1,721 ಯಾತ್ರಾರ್ಥಿಗಳನ್ನು ಹೊತ್ತ ಮೊದಲ ಬೆಂಗಾವಲು ಪಡೆ ಉತ್ತರ ಕಾಶ್ಮೀರ ಬಲ್ಟಾಲ್ ಬೇಸ್ ಕ್ಯಾಂಪ್‌ಗೆ ಮುಂಜಾನೆ 3 ಗಂಟೆಗೆ ಹೊರಟಿತು. 101 ವಾಹನಗಳಲ್ಲಿ 2,713 ಯಾತ್ರಿಕರನ್ನು ಹೊತ್ತ ಎರಡನೇ ಬೆಂಗಾವಲು ಪಡೆ ದಕ್ಷಿಣ ಕಾಶ್ಮೀರ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್‌ಗೆ 3.35 ಕ್ಕೆ ಹೊರಟಿತು. ಈ ವರ್ಷದ ಯಾತ್ರೆಯು 52 ದಿನಗಳ ನಂತರ ಆಗಸ್ಟ್ 29 ರಂದು ಶ್ರಾವಣ ಪೂರ್ಣಿಮಾ ಮತ್ತು ರಕ್ಷಾ ಬಂಧನ ಹಬ್ಬಗಳೊಂದಿಗೆ ಮುಕ್ತಾಯಗೊಳ್ಳಲಿದೆ