ಮುಂಬೈ :
ಆಮಿರ್ ಖಾನ್ ಅವರು ಮುಂಬರುವ ‘ಸಿತಾರೆ ಜಮೀನ್ ಪರ್’ ಚಿತ್ರದ ಪ್ರಮೋಷನ್ನಲ್ಲಿ ಭಾಗಿ ಆಗಿದ್ದಾರೆ. ಇದಕ್ಕಾಗಿ ವಿವಿಧ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಅವರು ಈ ವೇಳೆ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಕಥೆ ಕೇಳದೆ ಈ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾಗಿ ಅವರು ವಿವರಿಸಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
‘ನಾನು ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಅವರ ಬಗ್ಗೆ ನನಗೆ ಸಾಕಷ್ಟು ಪ್ರೀತಿ ಮತ್ತು ಗೌರವ ಇದೆ. ಹೀಗಾಗಿ ನಾನು ಸ್ಕ್ರಿಪ್ಟ್ ಕೇಳಲೂ ಇಲ್ಲ. ಲೋಕೇಶ್ ಅವರು ರಜನಿ ಅವರ ಸಿನಿಮಾ ಎನ್ನುತ್ತಿದ್ದಂತೆ ನಾನು ಒಪ್ಪಿಕೊಂಡೆ. ಯಾವುದೇ ಪಾತ್ರ ಆದರೂ ಅದನ್ನು ನಾನು ಮಾಡುತ್ತೇನೆ ಎಂದು ಅವರಿಗೆ ಹೇಳಿದ್ದೆ’ ಎಂದಿದ್ದಾರೆ ಆಮಿರ್ ಖಾನ್.
‘ಕೂಲಿ’ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಗುತ್ತಿದೆ, ನಾಗಾರ್ಜುನ ಅಕ್ಕಿನೇನಿ, ಉಪೇಂದ್ರ, ಸೌಬಿನ್ ಸಾಹಿರ್, ಶ್ರುತಿ ಹಾಸನ್, ಸತ್ಯರಾಜ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂಜಾ ಹೆಗ್ಡೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1995ರಲ್ಲಿ ‘ಆತಂಕ್ ಹಿ ಆತಂಕ್’ ಸಿನಿಮಾದಲ್ಲಿ ರಜನಿ ಹಾಗೂ ಆಮಿರ್ ಒಟ್ಟಾಗಿ ನಟಿಸಿದ್ದರು. ಇದನ್ನು ದಿಲೀಪ್ ಶಂಕರ್ ನಿರ್ದೇಶನ ಮಾಡಿದ್ದರು. ಈಗ 30 ವರ್ಷಗಳ ಬಳಿಕ ಇವರು ಮತ್ತೆ ಒಂದಾಗಿದ್ದಾರೆ.
ಆಮಿರ್ ಖಾನ್ ಅವರು ‘ಸಿತಾರೇ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ‘ತಾರೇ ಜಮೀನ್ ಪರ್’ ಸಿನಿಮಾದ ಮುಂದುವರಿದ ಭಾಗ. ಈ ಸಿನಿಮಾ ಜೂನ್ 20ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಫ್ರೆಂಚ್ ಚಿತ್ರದ ರಿಮೇಕ್. ಈ ಕಾರಣಕ್ಕೆ ಕೆಲವರಿಗೆ ಈ ಬಗ್ಗೆ ನಂಬಿಕೆ ಇಲ್ಲ.








