ನವದೆಹಲಿ:
ಭಾರತೀಯ ಮೂಲದ ಅನಿತಾ ಆನಂದ್ , ಕೆನಡಾದ ಮಾರ್ಕ್ ಕಾರ್ನಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಭಗವದ್ಗೀತೆಯ ಗ್ರಂಥ ಎಲ್ಲರ ಗಮನ ಸೆಳೆದಿದೆ. ಅನಿತಾ ಭಗವದ್ಗೀತೆ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಅನಿತಾ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದು ಎಲ್ಲರ ಗಮನ ಸೆಳೆದಿದ್ದರು. ಆ ಮೂಲಕ ಅವರು ಭಾರತೀಯ ಸಂಸ್ಕೃತಿ, ಸನಾತನ ಧರ್ಮವನ್ನು ಪರಿಪಾಲಿಸಿದ್ದಾರೆ. ಇದೀಗ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಕೆನಡಾದ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ. ಸುರಕ್ಷಿತ, ಉತ್ತಮ ಜಗತ್ತನ್ನು ನಿರ್ಮಿಸಲು ಮತ್ತು ಕೆನಡಿಯನ್ನರಿಗೆ ತಲುಪಿಸಲು ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ನಮ್ಮ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅನಿತಾ ಆನಂದ್ ಅವರ ಪೋಷಕರು ಭಾರತೀಯ ಮೂಲದವರು. ಅವರು ತಾಯಿ ತಮಿಳುನಾಡು ಮೂಲದವರಾದರೆ, ತಂದೆ ಪಂಜಾಬ್ ಮೂಲದವರು. ಕೆನಡಾದಲ್ಲೇ ಜನಿಸಿದ ಅನಿತಾ ಆನಂದ್ ಕಾರ್ಪೊರೇಟ್ ವಕೀಲರಾಗಿ ತಮ್ಮ ವೃತ್ತಿಪರ ಜೀವನವನ್ನು ಪ್ರಾರಂಭಿಸಿದರು. ಅವರ ರಾಜಕೀಯ ಪ್ರಯಾಣವು 2015 ರಲ್ಲಿ ಒಂಟಾರಿಯೊ ಸರ್ಕಾರಿ ತಜ್ಞರ ಸಮಿತಿಗೆ ನೇಮಕಾತಿಯೊಂದಿಗೆ ಪ್ರಾರಂಭವಾಯಿತು. ತರುವಾಯ, 2019 ರಲ್ಲಿ, ಅವರು ಓಕ್ವಿಲ್ಲೆಯ ಸಂಸತ್ ಸದಸ್ಯರಾಗಿ ಆಯ್ಕೆಯಾದರು. 2019ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಸಚಿವರಾಗಿ ಇವರು ನಿರ್ವಹಿಸಿದ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.
ಇನ್ನು ಅನಿತಾ ನಾಲ್ಕು ಪದವಿಗಳನ್ನು ಪಡೆದಿದ್ದಾರೆ. ಕ್ವೀನ್ಸ್ ವಿಶ್ವವಿದ್ಯಾಲಯದಿಂದ (ಅಲ್ಲಿ ಅವರು ಚಿನ್ನದ ಪದಕ ವಿಜೇತರಾಗಿದ್ದರು) ರಾಜಕೀಯ ಅಧ್ಯಯನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ನ್ಯಾಯಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಡಾಲ್ಹೌಸಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ಇವರದ್ದು. ಇನ್ನು ಆನಂದ್ ಕೆನಡಾದ ವಕೀಲ ಮತ್ತು ವ್ಯವಹಾರ ಕಾರ್ಯನಿರ್ವಾಹಕ ಜಾನ್ ನೋಲ್ಟನ್ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಮಕ್ಕಳಿದ್ದಾರೆ.
