ಚೆನ್ನೈ:
ತಮಿಳುನಾಡಿನಲ್ಲಿ ನಿನ್ನೆ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಕುರಿತು ದೂರುಗಳು ಬಂದಿದ್ದು, ಹೆಚ್ಚಿನ ಸಂಖ್ಯೆಯ ಮತದಾರರ ಹೆಸರು ನಾಪತ್ತೆಯಾಗಿರುವ ಸ್ಥಳಗಳಲ್ಲಿ ಮರು ಮತದಾನಕ್ಕೆ ಆಗ್ರಹಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ತಮಿಳುನಾಡಿನ ಎಲ್ಲಾ 39 ಸ್ಥಾನಗಳಿಗೆ ಶುಕ್ರವಾರ ಶೇ.72 ರಷ್ಟು ಮತದಾನವಾಗಿದೆ. ಕೊಯಮತ್ತೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯೂ ಆಗಿರುವ ಅಣ್ಣಾಮಲೈ, ಮತದಾರರ ಪಟ್ಟಿಯಿಂದ ಹಲವಾರು ಬಿಜೆಪಿ ಕಾರ್ಯಕರ್ತರ ಹೆಸರು ನಾಪತ್ತೆಯಾಗಿರುವುದರ ಹಿಂದೆ ರಾಜಕೀಯ ಹಸ್ತಕ್ಷೇಪ ನಡೆದಿರುವ ಶಂಕೆ ಇದೆ ಎಂದು ಹೇಳಿದರು.
ತಮಿಳುನಾಡಿನ ಸುಮಾರು 6.23 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, 950 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ 21 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 102 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಿದ್ದು. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು ವಿವಿಧ ರಾಜ್ಯಗಳ 102 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 63.7ರಷ್ಟು ಮತದಾನವಾಗಿದೆ.