ಬೆಂಗಳೂರು:
ಪಾಸ್ ಪೋರ್ಟ್ ವಿತರಣೆಯಲ್ಲಿ ಲಾಲ್ ಬಾಗ್ ಪಾಸ್ ಪೋರ್ಟ್ ಸೇವಾ ಕೇಂದ್ರ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ನೆರವಿನೊಂದಿಗೆ ತನ್ನದೇ ದಾಖಲೆಯನ್ನು ಮುರಿದಿದೆ.
ತ್ವರಿತಗತಿಯಲ್ಲಿ ಪಾಸ್ ಪೋರ್ಟ್ ವಿತರಣೆ ಮಾಡುವುದರಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಗೃಹಿಣಿಯೊಬ್ಬರು ಅರ್ಜಿ ಸಲ್ಲಿಸಿದ 3 ಗಂಟೆಗಳಲ್ಲಿ ಪಾಸ್ ಪೋರ್ಟ್ ನ್ನು ವಿತರಣೆ ಮಾಡಲಾಗಿದೆ.
ಬೃಂದಾದೇವಿ ಎಂಬುವವರ ಪತಿ ಇಂಡೋನೇಷ್ಯಾದ ಜಕಾರ್ತದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿದ್ದರು. ಈ ಹಿನ್ನೆಲೆಯಲ್ಲಿ ಬೃಂದಾದೇವಿ ತುರ್ತಾಗಿ ಇಂಡೋನೇಷ್ಯಾಗೆ ತೆರಳಬೇಕಿತ್ತು. ಬೆಂಗಳೂರಿನ ಮೂಲದ ಕುಮರೇಶನ್ (56) ಜಕಾರ್ತಾದಲ್ಲಿ ಸ್ಪಿನ್ನಿಂಗ್ ಮಿಲ್ ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೂ.12 ರಂದು ಕುಮಾರೇಶನ್ ಗೆ ಹೃದಯಾಘಾತ ಸಂಭವಿಸಿದ್ದು, ಶಸ್ತ್ರಚಿಕಿತ್ಸೆ ನಡೆಸಬೇಕಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಟುಂಬ ಸದಸ್ಯ ರಮೇಶ್ ಕುಮಾರ್, ಬೃಂದಾದೇವಿ ಅವರ ಬಳಿ ಈ ಹಿಂದೆ ಪಾಸ್ ಪೋರ್ಟ್ ಇತ್ತು ಆದರೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಅದರ ಅವಧಿ ಮುಕ್ತಾಯವಾಗಿದೆ ಎಂಬುದು ತಿಳಿಯಿತು. ತಕ್ಷಣವೇ ಲಾಲ್ ಬಾಗ್ ಸೇವಾ ಕೇಂದ್ರದಲ್ಲಿ ಆನ್ಲೈನ್ ಅಪಾಯಿಂಟ್ಮೆಂಟ್ ಪಡೆದೆವು, ನಮ್ಮ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಆರ್ ಪಿಒ ಮುಖ್ಯ ಕಚೇರಿಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.
ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೆ ಕೃಷ್ಣ ಟಿಎನ್‌ಐಇ ಜೊತೆ ಮಾತನಾಡಿದ್ದು, “ಅರ್ಜಿ ಸಲ್ಲಿಸಿದ ದಿನಾಂಕದಿಂದ ಎರಡು ವಾರಗಳಲ್ಲಿ ಮಾತ್ರ ಆನ್‌ಲೈನ್ ಅಪಾಯಿಂಟ್‌ಮೆಂಟ್ ಲಭ್ಯವಿತ್ತು. ಲಾಲ್ ಬಾಗ್‌ನಲ್ಲಿ ತಕ್ಷಣವೇ ಅವರಿಗೆ ನೇಮಕಾತಿಯನ್ನು ನೀಡಲಾಗಿದೆ ಎಂದು ನಾನು ಖಚಿತಪಡಿಸಿದೆ. ಅಗತ್ಯ ದಾಖಲೆಗಳೊಂದಿಗೆ ಮಧ್ಯಾಹ್ನ 1 ಗಂಟೆಗೆ ಅಲ್ಲಿಗೆ ತಲುಪುವಂತೆ ಕುಟುಂಬದವರಿಗೆ ತಿಳಿಸಲಾಯಿತು. ಅವರು ಎಲ್ಲವನ್ನೂ ಹಸ್ತಾಂತರಿಸಿದರು ಮತ್ತು ನಮ್ಮ ಕಚೇರಿ ಅದನ್ನು ಆನ್‌ಲೈನ್‌ನಲ್ಲಿ ನಮಗೆ ಕಳುಹಿಸಿತು.
ಪಾಸ್‌ಪೋರ್ಟ್‌ಗಳನ್ನು ಕೇಂದ್ರ ಕಚೇರಿಯಲ್ಲಿ ಮಾತ್ರ ಮುದ್ರಿಸಬಹುದು. “ಪರಿಶೀಲನೆಗಳ ನಂತರ, ನಾವು ಸಂಜೆ 4 ಗಂಟೆಗೆ ಪಾಸ್‌ಪೋರ್ಟ್ ನ್ನು ಮುದ್ರಿಸಿದೆವು ಮತ್ತು ಕುಟುಂಬ ಸದಸ್ಯರಿಗೆ ಬಂದು ಪಾಸ್‌ಪೋರ್ಟ್ ತೆಗೆದುಕೊಳ್ಳುವಂತೆ ಹೇಳಿದೆವು” ಎಂದು ಅವರು ವಿವರಿಸಿದರು.
ಮಹಿಳೆಯ ಕಷ್ಟಕ್ಕೆ ಸಹಾನುಭೂತಿ ತೋರಿದ ಎಲ್ಲ ಅಧಿಕಾರಿಗಳಿಂದ ಸಂಪೂರ್ಣ ಸಹಕಾರವಿತ್ತು. ನಾವು ತುಂಬಾ ಸಮಾಧಾನಗೊಂಡಿದ್ದೇವೆ. ಪಾಸ್ಪೋರ್ಟ್ ಬೇಗನೆ ಬಂದಿತು ಮತ್ತು ಬೃಂದಾದೇವಿ ಇಂಡೋನೇಷ್ಯಾಗೆ ತೆರಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಪರಿಶೀಲನೆಯನ್ನು ನಂತರ ಮಾಡಲಾಗುತ್ತದೆ ಎಂದು ಕೃಷ್ಣ ಮಾಹಿತಿ ನೀಡಿದ್ದಾರೆ.