ನ್ಯೂಯಾರ್ಕ್
ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಅಮೆರಿಕದ ವಾಲ್‌ಮಾರ್ಟ್ ಸಂಸ್ಥೆ ಮೇಲೆ ಹಿಂದೂಗಳು ಕಿಡಿ ಕಾರುತ್ತಿದ್ದಾರೆ. ಚಪ್ಪಲಿಗಳು, ಒಳಉಡುಪು, ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಹಿಂದೂ ದೇವರಾದ ಗಣೇಶನ ಚಿತ್ರವನ್ನು ಮುದ್ರಿಸಿ ಮಾರಾಟಕ್ಕಿಡಲಾಗಿದ್ದು, ಸದ್ಯ ವಾಲ್‌ಮಾರ್ಟ್ ವೆಬ್‌ಸೈಟ್‌ನಿಂದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಎಲ್ಲೆಡೆ ವಿರೋಧ ಕೇಳಿ ಬರುತ್ತಿದೆ.
ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಹಿಂದೂ ಸಂಬಂಧಿತ ಪೇಜ್ ಒಂದು , ಒಳಉಡುಪು ಮತ್ತು ಸಾಂದರ್ಭಿಕ ಉಡುಗೆಗಳ ಮೇಲೆ ಗಣೇಶನ ಚಿತ್ರ ಒಳಗೊಂಡಿರುವ ಕೆಲವು ವಸ್ತುಗಳು ಮಾರಾಟವಾಗುತ್ತಿದ್ದು, ವಾಲ್ಮಾರ್ಟ್ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ. ದೇವತೆಗಳು ಫ್ಯಾಷನ್ ವಸ್ತುಗಳಲ್ಲ. ನಮ್ಮ ಸಂಸ್ಕೃತಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ಧಾರ್ಮಿಕ ವಿಚಾರಕ್ಕೆ ಅಗೌರವ ತೋರುವ ಉತ್ಪನ್ನಗಳನ್ನು ಬ್ಯಾನ್ ಮಾಡಿ ಎಂದು ವಿನಂತಿಸಿಕೊಂಡಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ-ಅಮೆರಿಕನ್ನರ ಹಕ್ಕುಗಳ ಸಂಘಟನೆಯಾದ ಹಿಂದೂ ಅಮೇರಿಕನ್ ಫೌಂಡೇಶನ್ ಘಟನೆಯ ಬಗ್ಗೆ ಟೀಕಿಸಿದೆ. ಗಣೇಶನಂತಹ ಹಿಂದೂ ದೇವತೆಗಳಿಗೆ ಪ್ರಪಂಚದಾದ್ಯಂತ ಒಂದು ಶತಕೋಟಿ ಭಕ್ತಗಣವಿದೆ. ಈ ರೀತಿ ಅಗೌರವ ತೋರುವುದು ಸರಿ ಅಲ್ಲ. ಈಗಾಗಲೇ ನಾವು ವಾಲ್‌ಮಾರ್ಟ್ ಜತೆ ಈ ಬಗ್ಗೆ ಮಾತನಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವಾಲ್‌ಮಾರ್ಟ್‌ನ ಈ ನಡೆಗೆ ಸಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬಳಕೆದಾರರು ಕಿಡಿ ಕಾರುತ್ತಿದ್ದಾರೆ. ಸಾಂಸ್ಕೃತಿಕ ಭಾವನೆಗಳನ್ನು ಗೌರವಿಸುವುದು ಐಚ್ಛಿಕವಲ್ಲ-ಇದು ಅತ್ಯಗತ್ಯ ಎಂದು ಬ್ರ್ಯಾಂಡ್‌ಗಳು ಅರ್ಥಮಾಡಿಕೊಳ್ಳಬೇಕು ಎಂದು ಕಮೆಂಟ್ ಮಾಡಿದ್ದಾರೆ.