ಶೆನ್‌ಝೆನ್
ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಮತ್ತೆ ನಿರಾಸೆ ಕಂಡಿದ್ದಾರೆ. ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಸಿಂಧು ಅವರ ಗೆಲುವಿನ ಓಟ ಎರಡನೇ ಸುತ್ತಿಗೆ ಸೀಮಿತಗೊಂಡಿತು. ಗುರುವಾರ ರಾತ್ರಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕುವ ಮೂಲಕ ಸಿಂಗಲ್ಸ್‌ನಲ್ಲಿ ಪದಕ ಭರವಸೆಯನ್ನು ಜೀವಂತವಿರಿಸಿದ್ದಾರೆ. ಹಾಲಿ ಚಾಂಪಿಯನ್ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪಿ.ವಿ. ಸಿಂಧು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 16-21, 21-17, 21-23ರಿಂದ ಸಿಂಗಪುರದ ಯೋ ಜಿಯಾ ಮಿನ್ ಅವರಿಗೆ ಶರಣಾದರು. ಮೊದಲ ಸುತ್ತಿನಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಬುಸಾನನ್ ಒಂಗ್ಬಾಮ್‌ರುಂಗ್‌ಫಾನ್ ಅವರನ್ನು ಸೋಲಿಸಿದ್ದರು. ಭಾರತದ ಯುವ ಆಟಗಾರ್ತಿಯರಾದ ಅನುಪಮಾ ಉಪಾಧ್ಯಾಯ ಮತ್ತು ಮಾಳವಿಕಾ ಬನ್ಸೋಡ್ ಅವರೂ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದರು.
23 ವರ್ಷ ವಯಸ್ಸಿನ ಸೇನ್ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 21-6, 21-18 ನೇರ ಗೇಮ್‌ಗಳ ಅಂತರದಿಂದ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಅವರನ್ನು ಹಿಮ್ಮೆಟ್ಟಿಸಿದರು. ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಡೆನ್ಮಾರ್ಕ್‌ನ ರಾಸ್ಮಸ್ ಕ್ಜೇರ್ ಮತ್ತು ಫ್ರೆಡೆರಿಕ್ ಸೊಗಾರ್ಡ್ ಅವರನ್ನು 21-19, 21-15ರಿಂದ ಸೋಲಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಭಾರತೀಯ ಜೋಡಿ ಕಣಕ್ಕಿಳಿದ ಮೊದಲ ಟೂರ್ನಿ ಇದಾಗಿದೆ.
ಭಾರತ ಮಹಿಳಾ ತಂಡದ ದಿಗ್ಗಜ ಆಟಗಾರ್ತಿ, ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಗೌರವಾರ್ಥ ಐತಿಹಾಸಿಕ ಈಡನ್ ಗಾರ್ಡನ್ಸ್‌ನ ‘ಬಿ’ ಬ್ಲಾಕ್‌ಗೆ ಅವರ ಹೆಸರಿಡಲು ಬಂಗಾಲ ಕ್ರಿಕೆಟ್ ಅಸೋಸಿಯೇಶನ್ (ಸಿಎಬಿ) ಪ್ರಸ್ತಾವ ಸಲ್ಲಿಸಿದೆ. ಈ ಬಗ್ಗೆ ಸಿಎಬಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಸಿಎಬಿ ಒಪ್ಪಿಗೆ ಸೂಚಿಸಿದ್ದು ಮುಂದಿನ ವರ್ಷದ ಜನವರಿಯಲ್ಲಿ ನಡೆಯುವ ಭಾರತ- ಇಂಗ್ಲೆಂಡ್ ನಡುವಣ ಟಿ20 ಪಂದ್ಯದ ವೇಳೆ ಹೆಸರನ್ನು ಅನಾವರಣ ಮಾಡಲಾಗುತ್ತದೆ ಎಂದು ಸಿಎಬಿ ತಿಳಿಸಿದೆ.