ನವದೆಹಲಿ:
ದೇಶದಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಭಾನುವಾರ ಸಾರ್ವಕಾಲಿಕ ದಾಖಲೆಯ 90,633 ಸೋಂಕಿತರು ಪತ್ತೆಯಾಗಿದ್ದಾರೆ. ಇದು ಈ ವರೆಗಿನ ದೈನಂದಿನ ಗರಿಷ್ಟವಾಗಿದ್ದು, ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಒಂದೇ ದಿನ 90,633 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41 ಲಕ್ಷ ಗಡಿ ದಾಟಿದ್ದು, ಪ್ರಸ್ತುತ ದೇಶದಲ್ಲಿ ಸೋಂಕಿತರ ಸಂಖ್ಯೆ 41,13,812ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 1,065 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 70,626ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮತ್ತೊಂದೆಗೆ 41,13,812 ಮಂದಿ ಸೋಂಕಿತರ ಪೈಕಿ 31,80,866 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 8,62,320 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಈ ವರೆಗಿನ ದಾಖಲೆಯ 20800 ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಜೊತೆಗೆ 312 ಮಂದಿ ಜನರು ಬಲಿಯಾಗಿದ್ದಾರೆ. ಉಳಿದಂತೆ ಆಂಧ್ರಪ್ರದೇಶದಲ್ಲಿ 10,825 (71 ಸಾವು), ಕರ್ನಾಟಕದಲ್ಲಿ 9746 (128 ಸಾವು), ತಮಿಳುನಾೃಡು 5870 (64 ಸಾವು), ಉತ್ತರಪ್ರದೇಶ 6590 (81 ಸಾವು) ಹಾಗೂ ಪಶ್ಚಿಮ ಬಂಗಾಳದಲ್ಲಿ 3042 ಮಂದಿಗೆ ಸೋಂಕು ಹಾಗೂ 58 ಮಂದಿ ಬಲಿಯಾಗಿದ್ದಾರೆ.